ಸಂಸದರ 20 ವರ್ಷದ ಸಾಧನೆ ಶೂನ್ಯ

| Published : Feb 22 2024, 01:47 AM IST

ಸಾರಾಂಶ

ಸಂಸದ ಪಿ.ಸಿ.ಗದ್ದಿಗೌಡರು ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು ಬಿಟ್ಟರೆ 20 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿರುವ ಕಾರ್ಯ ಶೂನ್ಯ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂಸದ ಪಿ.ಸಿ.ಗದ್ದಿಗೌಡರು ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು ಬಿಟ್ಟರೆ 20 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿರುವ ಕಾರ್ಯ ಶೂನ್ಯ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಆರೋಪಿಸಿದರು.

ನವನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದ್ದಿಗೌಡರ ಸಂಸದರಾಗಿ 20 ವರ್ಷ ಕಳೆದರೂ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಶೇ.40ರಷ್ಟು ಕಾಮಗಾರಿ ಮಾತ್ರ ಆಗಿದೆ. ಉಳಿದದ್ದು ಇನ್ನೂ ಆಗಬೇಕಿದೆ. ಸಂಸದರ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯಲ್ಲಿನ ಕೇಂದ್ರದ ಯೋಜನೆಗಳು ಒಂದಿಷ್ಟು ವಿಫಲವಾಗಿವೆ. ಇನ್ನೊಂದಿಷ್ಡು ನನೆಗುದಿಗೆ ಬಿದ್ದಿವೆ. ಒಟ್ಟಾರೆ ಕಳೆದ 20 ವರ್ಷಗಳ ಅವಧಿಯಲ್ಲಿ ಸಂಸದರಾಗಿ ಗದ್ದಿಗೌಡರ ಸಾಧನೆ ಶೂನ್ಯವಾಗಿದೆ ಎಂದು ದೂರಿದರು.

ಗದ್ದಿಗೌಡರಗೆ ಸವಾಲು:

ಸಂಸದ ಗದ್ದಿಗೌಡರ ತಮ್ಮ ಅಧಿಕಾರಾವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ಸವಾಲು ಹಾಕಿದ ಅವರು, ಗದ್ದಿಗೌಡರ ಸ್ವಗ್ರಾಮ ಹೆಬ್ಬಳ್ಳಿ ನೋಡಿದರೆ ಸಾಕು ಅವರ ಕ್ಷೇತ್ರದ ಅಭಿವೃದ್ಧಿ ಎಷ್ಟಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳ ನಿಮಾರ್ಣಕ್ಕಾಗಿ ಜಿಲ್ಲೆಯ ರೈತರಿಂದ ಬಲವಂತವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕಾಶಪ್ಪನವರ ಒತ್ತಾಯಿಸಿದರು.

ಜೆಜೆಎಂ ಸಂಪೂರ್ಣ ವಿಫಲ:

ಕೇಂದ್ರ ಸರ್ಕಾರದ ಜಲ ಜೀವನಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗೆ ನಲ್ಲಿ ನೀರು ಯೋಜನೆ ಕ್ಷೇತ್ರದಲ್ಲಿ ಸಂಫೂರ್ಣ ವಿಫಲವಾಗಿದೆ ಎಂದು ಆಪಾದಿಸಿದ ಅವರು, ನೀರಿನ ವ್ಯವಸ್ಥೆಯೇ ಇಲ್ಲದೇ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಗ್ರಾಮಗಳಲ್ಲಿ ಉತ್ತಮ ರಸ್ತೆಗಳೆಲ್ಲ ಹಾಳಾಗಿವೆ. ಪ್ರವಾ ಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಂಸದರ ನಿರ್ಲಕ್ಷ್ಯ ಭಾವನೆಯಿಂದಾಗಿ ಇಂದಿಗೂ ಐಹೊಳೆ, ಬಾದಾಮಿ, ಪಟ್ಟದಕಲ್ಲು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ ವಾಗಿಲ್ಲ ಎಂದರು.

ಕೃಷಿ ಸಮಿತಿ ಅಧ್ಯಕ್ಷ ರಾಗಿರುವ ಸಂಸದ ಗದ್ದಿಗೌಡರಿಗೆ ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಕೊಡಿಸಲು ಸಾಧ್ಯವಾಗಿಲ್ಲ. ಕೃಷಿ ಸಮಿತಿ ಅಧ್ಯಕ್ಷರಾಗಿ ಮಾಡಿದ್ದೇನು? ಸಾಧನೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಇನ್ನಾದರೂ ಚುನಾವಣೆಗೂ ಮುನ್ನ ಜಿಲ್ಲೆಗೆ ಬರಬೇಕಿರುವ ಅನುದಾನಕ್ಕಾದರೂ ಪ್ರಯತ್ನಿಸಲಿ. ಇದುವರೆಗೂ ಎಷ್ಟು ಅನುದಾನ ತಂದಿದ್ದೀರಿ, ಎಷ್ಟು ಖರ್ಚಾಗಿದೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜು ಮನ್ನಿಕೇರಿ, ಚಂದ್ರಶೇಖರ ರಾಠೋಡ, ನಾಗರಾಜ್ ಹದ್ಲಿ ಇದ್ದರು.

---

ಬಾಕ್ಸ್‌

ಅದ್ಯಾವ ಸಾಧನೆ ನೋಡಿ ಸಂಸದ ರತ್ನ ಪ್ರಶಸ್ತಿ ನೀಡಿದ್ದಾರೋ!

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ಅತ್ಯಂತ ಕಡಿಮೆ ಪರಿಹಾರ, ಅಂದರೆ ಸ್ಕ್ವೇರ್ ಫೂಟ್‌ಗೆ ಕೇವಲ ₹80ಗೆ ನೀಡುತ್ತಿದ್ದಾರೆ. ಒತ್ತಾಯದಿಂದ ಭೂಸ್ವಾದೀನ ನಡೆದಿದೆ. ಇದು ಕೂಡಲೇ ನಿಲ್ಲಬೇಕು. ರೈತರ ಪರಿಸ್ಥಿತಿ ಅರ್ಥ ಮಾಡಿಕೊಂಡು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಯೋಗ್ಯ ಬೆಲೆ ನಿಗದಿ ಪಡಿಸಿ, ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಕೃಷಿ ಸಮಿತಿ ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಕ್ಷೇತ್ರದ ಸಂಸದರು ಈ ಬಗ್ಗೆ ಚಕಾರವೆತ್ತಿಲ್ಲ ಎಂದು ದೂರಿದ ಅವರು ದೆಹಲಿಯಲ್ಲಿ ರೈತರ ಹೋರಾಟ ನಡೆದಿದೆ. ಆ ಬಗೆಗೂ ಧ್ವನಿ ಎತ್ತಿಲ್ಲ. ಇಂತಹ ಸಂಸದರ ಅದ್ಯಾವ ಸಾಧನೆ ಗಮನಿಸಿ ಸರ್ಕಾರ ಸಂಸದ ರತ್ನ ಪ್ರಶಸ್ತಿ ನೀಡಿದೆಯೋ ಎಂದ ಅವರು ಪ್ರಶಸ್ತಿ ಪುರಸ್ಕೃತ ಸಂಸದ ಗದ್ದಿಗೌಡರನ್ನು ಅಭಿನಂದಿಸುವೆ ಎಂದರು.