ಸಾರಾಂಶ
ಮಾಜಿ ಸಚಿವ ಎಚ್.ಎಂ. ರೇವಣ್ಣನವರ ತೋಟದ ಮನೆಗೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ, ಪ್ರಸ್ತುತ ಚುನಾವಣೆ ಬಗ್ಗೆ ಚರ್ಚೆ ನಡೆಸಿ, ರೇವಣ್ಣನವರ ಆಶೀರ್ವಾದ ಪಡೆದರು,
ಕನ್ನಡಪ್ರಭ ವಾರ್ತೆ ಮಾಗಡಿ
ಮಾಜಿ ಸಚಿವ ಎಚ್.ಎಂ. ರೇವಣ್ಣನವರ ತೋಟದ ಮನೆಗೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ, ಪ್ರಸ್ತುತ ಚುನಾವಣೆ ಬಗ್ಗೆ ಚರ್ಚೆ ನಡೆಸಿ, ರೇವಣ್ಣನವರ ಆಶೀರ್ವಾದ ಪಡೆದರು, ರೇವಣ್ಣನವರ ಪತ್ನಿ ವತ್ಸಲ ರೇವಣ್ಣ ಹಾಗೂ ಕುಟುಂಬಸ್ಥರು ಜೊತೆಯಲ್ಲಿದ್ದರು.ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ನನ್ನನ್ನು ಕೈ ಹಿಡಿಯುವ ಮೂಲಕ ಸಂಸದರನ್ನಾಗಿ ಆಯ್ಕೆ ಮಾಡುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಹಿರಿಯ ನಾಯಕರ ಆಶೀರ್ವಾದ ಪಡೆಯುತ್ತಿದ್ದು, ಎಲ್ಲೆಡೆಯೂ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನುಡಿದಂತೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದು, ಚುನಾವಣೆಯಲ್ಲಿ ಮತ ಹಾಕುವ ಮೂಲಕ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಬೆಂಬಲ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಸಂಸದರು ತಿಳಿಸಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕ್ರಿಯಾಶೀಲ ಸಂಸದರಲ್ಲಿ ಡಿ.ಕೆ.ಸುರೇಶ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ಇಳಿದು ರಾಜಕೀಯ ಮಾಡುವ ಏಕೈಕ ಸಂಸದರಾಗಿ ಗುರುತಿಸಿಕೊಂಡಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಇವರ ಅವಧಿಯಲ್ಲಾಗಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಆಡಳಿತದಲ್ಲಿ ಬಡವರಿಗೆ ಜಾರಿಗೆ ತಂದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಮತ್ತೊಮ್ಮೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.ಇದೇ ವೇಳೆ ಪುರಸಭಾ ಸದಸ್ಯ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಬಸವರಾಜು, ತೋಟದಮನೆ ಗಿರೀಶ್ ಸೇರಿ ಇತರರು ಭಾಗವಹಿಸಿದ್ದರು.