ಸಾರಾಂಶ
11 ಸಾವಿರ ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುಡಿತಿನಿ, ವೇಣಿವೀರಾಪುರ, ಕೊಳಗಲ್ಲು ಹಾಗೂ ಹರಗಿನಡೋಣಿ ಗ್ರಾಮದ ರೈತರಿಂದ ಕೈಗಾರಿಕೆ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದ್ದು ತ್ವರಿತವಾಗಿ ಕೈಗಾರಿಕೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಕೋರಿ ಸಂಸದ ಈ.ತುಕಾರಾಂ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಪದಾಧಿಕಾರಿಗಳು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಂಸದ ತುಕಾರಾಂ, ಆರ್ಸೆಲರ್ ಮಿತ್ತಲ್, ಬ್ರಾಹ್ಮಿಣಿ ಸ್ಟೀಲ್ಸ್,(ಉತ್ತಮಗಾಲ್ವ) ಹಾಗೂ ಎನ್ ಎಂ ಡಿ ಸಿ ಕೈಗಾರಿಕಾ ಕಂಪನಿಗಳ ಕೈಗಾರಿಕೆ ಸ್ಥಾಪನೆಗೆ ನಾಲ್ಕು ಹಳ್ಳಿಗಳ 11 ಸಾವಿರ ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ವಹಿಸಲಾಗಿಲ್ಲ. ಕೈಗಾರಿಕೆ ಸ್ಥಾಪನೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ. ಆರ್ಥಿಕ ಚಟುವಟಿಕೆಗಳು ಚುರುಕಾಗಲಿವೆ. ಕೈಗಾರಿಕೆ ಸ್ಥಾಪನೆಯಿಂದ ಕುಟುಂಬ ಸದಸ್ಯರಿಗೆ ಉದ್ಯೋಗ ದೊರೆಯಲಿದೆ ಎಂಬ ನಿರೀಕ್ಷೆಯಿಂದ ರೈತರು ಜಮೀನುಗಳನ್ನು ನೀಡಿದ್ದಾರೆ. ಆದರೆ, ಕೈಗಾರಿಕೆ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ವಹಿಸಲಾಗಿಲ್ಲ ಎಂದು ವಿವರಿಸಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಯಶ್ವಂತ್ ರಾಜ್, ರಾಜಶೇಖರ್, ಶ್ರೀನಿವಾಸಲು ಇತರರಿದ್ದರು.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗೆಂದು ಜಮೀನು ಪಡೆದಿರುವ ಜಾಗದಲ್ಲಿ ತ್ವರಿತವಾಗಿ ಕೈಗಾರಿಕೆ ನಿರ್ಮಿಸಬೇಕು ಎಂದು ಕೋರಿ ಸಂಸದ ಈ.ತುಕಾರಾಂ ನೇತೃತ್ವದಲ್ಲಿ ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.