ಉಳ್ಳಾಲ, ಸೋಮೇಶ್ವರ ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಭೇಟಿ

| Published : Jul 01 2024, 01:51 AM IST

ಸಾರಾಂಶ

ಉಳ್ಳಾಲ, ಸೋಮೇಶ್ವರ ಸಮುದ್ರತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭೆ ಅಧಿವೇಶದ ನಡುವಿನಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಲು ಮಂಗಳೂರಿಗೆ ಆಗಮಿಸಿದ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾನುವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಳ್ಳಾಲದ ಕುತ್ತಾರು ಮದನಿ ನಗರದಲ್ಲಿ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿ‌ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರವಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಉಳ್ಳಾಲ, ಸೋಮೇಶ್ವರ ಸಮುದ್ರತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.

ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರಲ್ಲದೆ, ಸಾಧ್ಯವಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಹೇಳಿದರು.

ಉಳ್ಳಾಲ ತಹಸೀಲ್ದಾರ್‌ ಪ್ರದೀಪ್ ಕುರುಡೇಕರ್, ಬಂದರು ಎಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಎಂಇ‌ಐ ಮಾಜಿ ಅಧ್ಯಕ್ಷ ಸಂತೋಷ್ ಬೋಳಿಯಾರ್ ಮತ್ತಿತರರಿದ್ದರು.