ಅಪಘಾತದ ಕುಟುಂಬಗಳ ಉತ್ತಮ ಜೀವನಕ್ಕೆ ಸಹಕಾರ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ

| Published : Jul 01 2024, 01:51 AM IST

ಅಪಘಾತದ ಕುಟುಂಬಗಳ ಉತ್ತಮ ಜೀವನಕ್ಕೆ ಸಹಕಾರ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಅಪಘಾತದಿಂದ ಮೃತರ ಕುಟುಂಬ ಅಷ್ಟೇ ಅಲ್ಲ, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿರುವುದು ಕಂಡುಬರುತ್ತಿದೆ. ಆಕಸ್ಮಿಕ ಅವಘಡಗಳು ಸಹಜ. ಇವೆಲ್ಲವನ್ನೂ ಮೆಟ್ಟಿ ನಿಂತು ಬದುಕಬೇಕಾದ ಅನಿವಾರ್ಯತೆ ಇದೆ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಹಾವೇರಿ ಬ್ಯಾಡಗಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಆರ್ಥಿಕ ಸಹಾಯದ ಜೊತೆಗೆ ಉತ್ತಮ ಜೀವನ ನಡೆಸಲು ಸಹಕರಿಸುತ್ತೇನೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಮನೆಗಳಿಗೆ ಭಾನುವಾರ ಭೇಟಿ ನೀಡಿ ಸಾಂತ್ವಾನ ಹೇಳಿದ ಅವರು, ಅಪಘಾತದಲ್ಲಿ ಮೃತನಾದ ಶರಣಪ್ಪ ರವರ ಮಗ ಅರುಣ್ ರವರಿಗೆ 3 ತಿಂಗಳ ಹಸುಗೂಸು ಇದ್ದು, ಪತ್ನಿಗೆ ಸರ್ಕಾರಿ ಕೆಲಸ. ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಶುರಾಮ್ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.

ಆಶಾ ಕಾರ್ಯಕರ್ತೆ ವಿಶಾಲಾಕ್ಷಮ್ಮನ ಮನೆಯಲ್ಲಿ ಬದುಕುಳಿದಿರುವ ಅಂಗವಿಕಲೆ ಅರ್ಪಿತಾಳಿಗೆ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಅವಳು ಬದುಕಿರುವ ವರಗೂ ಆಕೆಯನ್ನು ಸಾಕಿ ಸಲಹಲು, ಆಕೆಯ ಜೀವನ ನಿರ್ವಹಣೆಗೆ ಬೇಕಾಗಬಹುದಾದ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮೃತ ಕುಟುಂಬಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ, ಇಂತದೊಂದು ದುರ್ಘಟನೆ ನಡೆಯಬಾರದಿತ್ತು. ಆದರೆ, ವಿಧಿ ಮುಂದೆ ನಮ್ಮ ನಿಮ್ಮ ಆಟ ಏನೂ ನಡೆಯುವುದಿಲ್ಲ. ಆದ್ದರಿಂದ ನಾವುಗಳು ಎಷ್ಟು ಹುಷಾರಿರುತ್ತೇವೂ ಅಷ್ಟೇ ಒಳ್ಳೆಯದು ಎಂದರು.

ಈ ಅಪಘಾತದಿಂದ ಮೃತರ ಕುಟುಂಬ ಅಷ್ಟೇ ಅಲ್ಲ, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿರುವುದು ಕಂಡುಬರುತ್ತಿದೆ. ಆಕಸ್ಮಿಕ ಅವಘಡಗಳು ಸಹಜ. ಇವೆಲ್ಲವನ್ನೂ ಮೆಟ್ಟಿ ನಿಂತು ಬದುಕಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಇಂದಿನ ಯುವಕರು ಉತ್ತಮ ರಸ್ತೆಗಳಿವೆ ಎಂದು ವಾಹನಗಳನ್ನು ಜೋರಾಗಿ ಓಡಿಸುವುದನ್ನು ಬಿಡಬೇಕು. ನಾವು ತಲುಪುವ ಸ್ಥಳ ಅರ್ಧ ಘಂಟೆ ತಡವಾಗಬಹುದು ಅಷ್ಟೆ. ಇದರಿಂದ ಯಾವುದೇ ನಷ್ಟ ಇಲ್ಲ. ಬದಲಾಗಿ ಅವಸರ ಮತ್ತು ಅತಿಯಾದ ವೇಗದಿಂದ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡಿರುವ ಇಡೀ ಕುಟುಂಬವೇ ತೊಂದರೆಗೆ ಒಳಗಾಗುತ್ತದೆ. ಆದ್ದರಿಂದ ಯುವಕರು ಸ್ವಲ್ಪ ನಿಧಾನವಾಗಿ ವಾಹನ ಚಲಾಯಿಸಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.ಹಾಡೋನಹಳ್ಳಿ ತೆಪ್ಪದ ದುರಂತದ ಪ್ರಸ್ತಾಪ:

ಕೆಲ ವರ್ಷಗಳ ಹಿಂದೆ ಹಾಡೋನಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ತೆಪ್ಪ ಮುಳುಗಿ 12 ಜನ ಮೃತಪಟ್ಟ ಘಟನೆ ಪ್ರಸ್ತಾಪಿದ ಸಚಿವರು, ಹೆಚ್ಚು ಕಡಿಮೆ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿರುವ ಅಪಘಾತ ಪ್ರಕರಣ ಎರಡೂ ತಾಳೆಯಾಗುವಂತಿವೆ. ಅಂದೂ ಕೂಡ ರಾತ್ರಿ ಹಾಡೋನಹಳ್ಳಿ ಗ್ರಾಮಕ್ಕೆ ಶಾಸಕಿ ಸಹೋದರಿ ಶಾರದಾ ಪೂರ್ಯಾ ನಾಯ್ಕ್ ಒಟ್ಟಿಗೆ ಭೇಟಿ ನೀಡಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿತ್ತು. ಪ್ರಸ್ತುತ ಘಟನೆ ತಿಳಿದೊಡನೆ ಶಾಸಕರೊಂದಿಗೆ ಮಾತನಾಡಿದಾಗ ಸಮಾದಾನವಾಗದೆ ಇದ್ದುದರಿಂದ ಇಂದು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ನಿಮ್ಮೆಲ್ಲರೊಂದಿಗೆ ಚರ್ಚಿಸಲು ಅವಕಾಶ ಸಿಕ್ಕಿತು. ನಾಳೆ ಪಾರ್ಲಿಮೆಂಟ್ ಸಭೆ ಇರುವುದರಿಂದ ನಾನು ತುರ್ತಾಗಿ ತೆಳರಳಲಿದ್ದೇನೆ. ಮುಂದೆ ಇನ್ನೊಂದು ದಿನ ಬಿಡುವು ಮಾಡಿಕೊಂಡು ಮತ್ತೆ ಇಲ್ಲಿಗೆ ಬರುತ್ತೇನೆ. ಆಗ ನಿಮ್ಮಗಳ ಸಮಸ್ಯೆ ಆಲಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಶಾಸಕರಾದ ಸಾ.ರಾ.ಮಹೇಶ್, ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಜಿಲ್ಲಾ ಉಪವಿಭಾಗಾಧಿಕಾರಿ, ರಾಜಸ್ವ ನಿರೀಕ್ಷಕ ಮಾನೋಜಿ, ಸಿದ್ಲೀಪುರ ಸತೀಶ್, ಗೀತಾ, ಜಿ.ಎನ್.ಪರಶುರಾಮ್ ರಾವ್, ರೈತ ಮುಖಂಡ ಯಶ್ವಂತ್ ರಾವ್ ಘೋರ್ಪಡೆ, ಗ್ರಾಮಸ್ಥರಾದ ಕೃಷ್ಣೋಜಿರಾವ್, ಮುರಾರಿ ರಾವ್, ಮಲ್ಲೇಶ್ ರಾವ್, ತಿಪ್ಪೇಶ್ ರಾವ್, ಪರಶುರಾಮ್, ಮಂಜುನಾಥ್, ಬೋಜರಾವ್ ಬಸವರಾಜ್ ನಾಗೇಶ್ ರಾವ್, ಲಾಯರ್ ಲೋಕೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

--------------------------

ಪೋಟೋ: 30 ಎಚ್.ಎಚ್.ಆರ್ ಪಿ. 3

ಹೊಳೆಹೊನ್ನೂರಿನ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಅಪಘಾತಕ್ಕೀಡಾದ ಕುಟುಂಬದವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಾತ್ವನ ಹೇಳಿದರು.

-------------------------

ಪೋಟೋ: 30ಎಚ್.ಎಚ್.ಆರ್ ಪಿ. 4

ಹೊಳೆಹೊನ್ನೂರಿನ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಸಾತ್ವಾನ ಹೇಳಿ ಕೇಂದ್ರ ಸಚಿವ ಕುಮಾರ ಸ್ವಾಮಿ ಗ್ರಾಮಸ್ಥರು ಹಾಗೂ ಕುಟುಂಬದವರ ಅಳಲನ್ನು ಆಲಿಸಿದರು.