ಸಾರಾಂಶ
ಕಾರವಾರ: ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ- ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತಿ ಮುಖ್ಯ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ತಿಳಿಸಿದರು.
ಶನಿವಾರ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಜನ್ಮದಿನದ ಅಂಗವಾಗಿ ಕಾರವಾರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ನಡೆದ 18ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಸರ್ಕಾರವು ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ- ಸಂಖ್ಯೆಗಳ ಪ್ರಾಮುಖ್ಯತೆಯನ್ನು ವಿವರಿಸಿ ನಿಖರವಾದ, ನಂಬಲರ್ಹ ಅಂಕಿ- ಅಂಶಗಳನ್ನು ಕಾಲಮಿತಿಯೊಳಗಾಗಿ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆಯ ಪಾತ್ರ ಮಹತ್ವದಾಗಿದ್ದು, ಸಾಂಖ್ಯಿಕ ಸಿಬ್ಬಂದಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ, ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ ಜಿಲ್ಲೆಯಲ್ಲಿ ಸಾಂಖ್ಯಿಕ ಇಲಾಖಾ ವತಿಯಿಂದ ಕೈಗೊಳ್ಳಲಾಗುವ ಜನನ- ಮರಣ ನೋಂದಣಿ, ಕೃಷಿ ಅಂಕಿ- ಅಂಶಗಳು, ಬೆಳೆ ಅಂದಾಜು ಸಮೀಕ್ಷೆ, ಸಕಾಲಿಕ ವರದಿ ಯೋಜನೆಯಡಿ ಬೆಳೆ ಸಮೀಕ್ಷೆ ಮೇಲ್ವಿಚಾರಣೆ, ಬೆಲೆ ವರದಿ, ಕೃಷಿ ಕೂಲಿ ವರದಿಗಳು, ಹಣ್ಣು ತರಕಾರಿ ಸಮೀಕ್ಷೆ, ಧಾರಣೆ ವರದಿ, ರಾಷ್ಟ್ರೀಯ ಮಾದರಿ ಸಮೀಕ್ಷೆ, ಜಿಲ್ಲಾ ಅಂಕಿ- ಅಂಶ ನೋಟದ ಪ್ರಕಟಣೆ ಮುಂತಾದ ಮಹತ್ವದ ಕಾರ್ಯಗಳ ಕುರಿತು ವಿವರಿಸಿದರು.ಈ ವರ್ಷ ಸರ್ಕಾರವು ಆಯ್ಕೆ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ಗುರಿಗಳನ್ನು ಸಾಧಿಸಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತಳಮಟ್ಟದ ಮಾಹಿತಿಯ ಮಹತ್ವ ವಿಷಯದ ಮೇಲೆ ಉಪನ್ಯಾಸವನ್ನು ನೀಡಿ, ಅಭಿವೃದ್ಧಿಯ ವ್ಯಾಖ್ಯಾನ, ಕೃಷಿ, ಸೇವಾ, ಕೈಗಾರಿಕೆ ಇತ್ಯಾದಿ ವಲಯಗಳಲ್ಲಿನ ಅಭಿವೃದ್ಧಿ ದರ, ದೇಶದ ಆಂತರಿಕ ಉತ್ಪನ್ನ, ಹಸಿವು ಮುಕ್ತ ಆರೋಗ್ಯಕರ ಸಮಾಜಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿ ಸುಸ್ಥಿರತೆಯನ್ನು ಸಾಧಿಸುವ ಬಗ್ಗೆ ವಿವರಿಸಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಸಿ.ಎಸ್. ಬಣಕಾರ್ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಹಾಗೂ ಎಲ್ಲ ತಾಲೂಕುಗಳ ಸಾಂಖ್ಯಿಕ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ದತ್ತಾತ್ರಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಅಶ್ವಿನಿ ಮೇಸ್ತ ಸ್ವಾಗತಿಸಿದರು. ಸರೋಜಿನಿ ನಾಯ್ಕ ನಿರೂಪಿಸಿ, ಶಿಲ್ಪಾ ಗೌಡ ವಂದಿಸಿದರು.