ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸಲು ಸದಾ ಸಿದ್ಧನಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮೈಸೂರು -ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಭಾರತೀಯ ಜನತಾ ಪಕ್ಷದ ವತಿಯಿಂದ ಶಕ್ತಿ ಕೇಂದ್ರಗಳ ಭೇಟಿ ಹಾಗೂ ಸ್ಥಳೀಯವಾಗಿ ಸಮಸ್ಯೆ ಬಗ್ಗೆ ತಿಳಿಯಲು ಮತ್ತು ಪಕ್ಷದ ಸಂಘಟನಾತ್ಮಕ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಐಗೂರು, ಕಿರಗಂದೂರು, ಶಾಂತಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ನಂತರ ತೋಳೂರುಶೆಟ್ಟಳ್ಳಿಯ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಟವರ್ ಮತ್ತು ಅಮೃತ್-2 ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮ ಸಡಕ್ ಯೋಜನೆ ಹಾಗೂ ಎನ್‌ಡಿಆರ್‌ಎಫ್ ಮುಖಾಂತರ ರಸ್ತೆ ಕಾಮಗಾರಿಗಳನ್ನು ಮುಂದುವರಿಸಲಾಗುವುದು ಎಂದರು.ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ವಿಶ್ವ ನಾಯಕನಾಗಿ ಹೊರಹೊಮ್ಮಿದ್ದಾರೆ. ಭಾರತದ ಸೇನೆ ಮತ್ತು ಸಂಸ್ಕೃತಿಯು ವಿಶ್ವಮಟ್ಟದಲ್ಲಿ ಗುರುತನ್ನು ಪಡೆಯುವಲ್ಲಿ ಮೋದಿಜಿಯವರು ಶ್ರಮಿಸಿದ್ದಾರೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿಯ ಆಡಳಿತಕ್ಕೆ ೧೧ವರ್ಷಗಳಾಗಿದ್ದು, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ವ್ಯಾಪಕವಾಗಿ ನಡೆಯುತ್ತಿದ್ದು, ಸಂಪರ್ಕ ವ್ಯವಸ್ಥೆಯೂ ಸುಧಾರಣೆಯಾಗಿದೆ ಎಂದು ಅವರು ತಿಳಿಸಿದರು.ಇನ್ನೊಂದು ವರ್ಷದಲ್ಲಿ ಸರ್ಕಾರ ಪತನ: ಅಪ್ಪಚ್ಚು ರಂಜನ್ಮಾಜಿ ಸಚಿವ ಅಪ್ಪಚು ರಂಜನ್ ಮಾತನಾಡಿ, ಸಿ ಮತ್ತು ಡಿ ಆದೇಶವನ್ನು ಹಿಂಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನಮ್ಮ ಸರ್ಕಾರ ಇದ್ದಾಗ ರೈತರಿಗೆ ಪಟ್ಟೆ ಕೊಡುವ ಕೆಲಸ ಮಾಡಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಲ್ಲ ಜನಾಂಗವನ್ನು ಸಮಾನತೆಯಲ್ಲಿ ನೋಡುವ ಕೆಲಸ ಮಾಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಂದೇ ಜನಾಂಗವನ್ನು ಮೇಲೇತ್ತುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಸರ್ಕಾರ. ಸಚಿವರ ಕಚ್ಚಾಟದಿಂದ ಇನ್ನು ಒಂದು ವರ್ಷದಲ್ಲಿ ಸರ್ಕಾರ ಬಿದ್ದುಹೋಗುತ್ತದೆ ಎಂದರು.ಐಗೂರಿನ ಕಬ್ಬಿಣದ ಸೇತುವೆ ಗುದ್ದಲಿ ಪೂಜೆ ನಡೆದಿದ್ದು, ಇನ್ನು ಸಹ ಕಾಮಗಾರಿ ಶುರುವಾಗಿಲ್ಲ. ಅಕ್ರಮ -ಸಕ್ರಮದ ಅಧ್ಯಕ್ಷರು ಶಾಸಕರೇ ಆಗಿದ್ದು, ಇನ್ನು ಕೂಡ ಯಾವುದೇ ಸಭೆಯಾಗಿಲ್ಲ. ರೈತರಿಗೆ ಪಟ್ಟೆ ಕೊಡುವ ಕೆಲಸ ನಡೆದಿಲ್ಲ ಎಂದರು.ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಜನರಿಗೆ ತೊಂದರೆ ಕೊಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ. ಮಲೆನಾಡು ಭಾಗದ ಜನರ ಸಮಸ್ಯೆಗಳ ಬಗ್ಗೆ ಯಾವ ಶಾಸಕರು ಸಹ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ ಗಿಡದಲ್ಲಿ ಕೊಳೆರೋಗ ಉಂಟಾಗಿ ಬೆಳೆ ನಷ್ಟವಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸ್ಥಳೀಯವಾಗಿ ಇರುವ ನೆಟ್ ವರ್ಕ್ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಸಿ ಮತ್ತು ಡಿ ಸಮಸ್ಯೆ, ಕೆಲವು ರಸ್ತೆಗಳ ಸಮಸ್ಯೆ ಬಗ್ಗೆ ಸಂಸದರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಬಿ.ಬಿ. ಭಾರತೀಶ್, ವಿ.ಕೆ.ಲೋಕೇಶ್, ಬಿ.ಜೆ. ದೀಪಕ್, ಧರ್ಮಪ್ಪ, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.