ಕನ್ನಡಪ್ರಭ ವಾರ್ತೆ ದಾವಣಗೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕ ಖಜಾಂಚಿಯಾಗಿ ದಾವಣಗೆರೆಯ ಯುವ ಉದ್ಯಮಿ ಹಾಗೂ ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್ ಸಂಸ್ಥೆ ಪಾಲುದಾರ ಮೃನಾಲ್ ಬಂಕಾಪುರ ಅವರನ್ನು ನೇಮಕ ಮಾಡಲಾಗಿದೆ.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಯುವ ಘಟಕ ಅಧ್ಯಕ್ಷ ವೆಂಕಟ್ ರೆಡ್ಡಿ ಪಾಟೀಲ ನೇತೃತ್ವದಲ್ಲಿ ರಚಿಸಲಾದ ರಾಷ್ಟ್ರೀಯ ಯುವ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಮೃನಾಲ್ ಬಂಕಾಪುರ ಅವರಿಗೆ ಖಜಾಂಚಿ ಜವಾಬ್ದಾರಿ ನೀಡಲಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸಮಾಜದ ಸಂಘಟನೆ, ಯುವಜನರ ಸಬಲೀಕರಣ, ಶಿಕ್ಷಣ, ಉದ್ಯೋಗ, ಸಮಾಜಸೇವೆ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರರ ತತ್ವಗಳ ಪ್ರಸಾರ ಮತ್ತು ಅನುಷ್ಠಾನ ಎಂಬ ಉದ್ದೇಶದೊಂದಿಗೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ರಾಷ್ಟ್ರೀಯ ಯುವ ಘಟಕವು ಈ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಮೃನಾಲ್ ಬಂಕಾಪುರ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಕುಟುಂಬವು ಹಲವು ವರ್ಷಗಳಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ತತ್ವಗಳು ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿದೆ. ಬಸವೇಶ್ವರರ ಚಿಂತನೆಗಳು ನಮ್ಮ ಬದುಕನ್ನು ಶ್ರೀಮಂತಗೊಳಿಸಿದ್ದು, ಸಮಾಜಮುಖಿ ಬದುಕಿಗೆ ದಾರಿದೀಪವಾಗಿವೆ ಎಂದರು.

ರಾಷ್ಟ್ರೀಯ ಯುವ ಘಟಕದ ಖಜಾಂಚಿಯಾಗಿ ದೊರೆತಿರುವ ಈ ಜವಾಬ್ದಾರಿಯನ್ನು ಯುವಜನರಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ತತ್ವಗಳು, ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಅವಕಾಶವಾಗಿ ಸ್ವೀಕರಿಸುತ್ತೇನೆ. ಸಮಾಜದ ಅಭಿವೃದ್ಧಿ, ಯುವಶಕ್ತಿಯ ಸಂಘಟನೆ ಹಾಗೂ ಸೇವಾ ಕಾರ್ಯಗಳ ಮೂಲಕ ಮಹಾಸಭೆಯ ಗುರಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.


ತಮ್ಮ ನೇಮಕಾತಿಗೆ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ವಿಶ್ವಾಸ ವ್ಯಕ್ತಪಡಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಈಶ್ವರ ಖಂಡ್ರೆ, ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಎಸ್.ಎಸ್. ಗಣೇಶ್, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ವೆಂಕಟ ರೆಡ್ಡಿ ಪಾಟೀಲ, ರಾಜ್ಯ ಸಮಿತಿ ಸದಸ್ಯ ಅಣಬೇರು ಸಂದೀಪ್, ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ, ಸಿದ್ದಲಿಂಗ ಸ್ವಾಮಿ, ಮಹಾಸಭೆಯ ಎಲ್ಲ ಪದಾಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳಿಗೆ ಮೃನಾಲ್ ಬಂಕಾಪುರ ಕೃತಜ್ಞತೆ ಸಲ್ಲಿಸಿದರು.

ಸಮಾಜದ ಏಕತೆ, ಯುವಜನರ ಸಬಲೀಕರಣ, ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳ ವಿಸ್ತರಣೆ, ಸೇವಾ ಚಟುವಟಿಕೆಗಳು ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.

- - -

-13ಕೆಡಿವಿಜಿ36: ಮೃನಾಲ್ ಬಂಕಾಪುರ