ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ೨೦೨೬-೨೭ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ೯೧೫ ಕೋಟಿ ರು.ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗೆ ೨೭೨ ಕೋಟಿ ರು. ನಷ್ಟವಾಗಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ೨೦೨೬-೨೭ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ೯೧೫ ಕೋಟಿ ರು.ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗೆ ೨೭೨ ಕೋಟಿ ರು. ನಷ್ಟವಾಗಿತ್ತು.ಬುಧವಾರ ನಡೆದ ನಿರ್ದೇಶಕರ ಮಂಡಳಿಯ ೨೭೬ನೇ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಈ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣೆಯ ಒಟ್ಟು ಆದಾಯ ೪೧,೬೦೯ ಕೋಟಿ ರು.ಗೆ ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯ ೨೦,೯೮೯ ಕೋಟಿ ರು.ಗೆ ಹೋಲಿಸಿದರೆ ಸುಮಾರು ದುಪ್ಪಟ್ಟಾಗಿದೆ. ತೆರಿಗೆ ಪೂರ್ವ ಲಾಭ ೧,೨೧೫ ಕೋಟಿ ರು. ದಾಖಲಾಗಿದ್ದು, ಕಂಪನಿಯ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ.ಈ ಅವಧಿಯಲ್ಲಿ ಕಂಪನಿ ಹಲವು ಪ್ರಮುಖ ಸಾಧನೆಗಳನ್ನೂ ದಾಖಲಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಎಟಿಎಫ್ ಪೈಪ್‌ಲೈನ್‌ಗೆ ಪಿಎನ್‌ಜಿಆರ್‌ಬಿ ಅನುಮೋದನೆ ದೊರೆತಿದೆ. ಮಂಗಳೂರಿನ ಏಜಿಸ್ ಟರ್ಮಿನಲ್, ಆಂಧ್ರಪ್ರದೇಶದ ಹಿಂದೂಪುರ ಹಾಗೂ ತಮಿಳುನಾಡಿನ ಎನ್ನೋರ್ ಟರ್ಮಿನಲ್‌ಗಳಲ್ಲಿ ಉತ್ಪನ್ನಗಳ ಲೋಡಿಂಗ್ ಆರಂಭವಾಗಿದೆ. ನವಿ ಮುಂಬೈನ ಜೆಎನ್‌ಪಿಎ, ಕಾಕಿನಾಡ ಮತ್ತು ಕೃಷ್ಣಪಟ್ಟಣದ ಟ್ಯಾಂಕ್ ಸಂಗ್ರಹಣಾ ಸೌಲಭ್ಯಗಳಿಗೆ ಗುತ್ತಿಗೆ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ, ಬಳಸಿದ ಅಡುಗೆ ಎಣ್ಣೆ ಸಹ-ಸಂಸ್ಕರಣೆಗೆ ಐಎಸ್‌ಸಿಸಿ ಸಿಒಆರ್‌ಎಸ್‌ಐಎ ಪ್ರಮಾಣೀಕರಣ ಪಡೆದು ಸುಸ್ಥಿರ ವಿಮಾನ ಇಂಧನ ಉತ್ಪಾದನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸ್ವಚ್ಛತಾ ಪಖ್ವಾಡಾ ಪ್ರಶಸ್ತಿ ೨೦೨೩ರಲ್ಲಿ ’ಬಿ’ ವಿಭಾಗದಲ್ಲಿ ದ್ವಿತೀಯ ಬಹುಮಾನ ಹಾಗೂ ೨೦೨೪ರ ಆವೃತ್ತಿಯಲ್ಲಿ ಸಮಾಧಾನಕರ ಪ್ರಶಸ್ತಿಯನ್ನು ಎಂಆರ್‌ಪಿಎಲ್ ಪಡೆದುಕೊಂಡಿದೆ.