ಸಾರಾಂಶ
ದೊಡ್ಡಬಳ್ಳಾಪುರ: ಮುಡಾ ಪ್ರಕರಣವು ಎನ್‌ಡಿಎ ವ್ಯವಸ್ಥಿತ ಕುತಂತ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ದೊಡ್ಡಬಳ್ಳಾಪುರ: ಮುಡಾ ಪ್ರಕರಣವು ಎನ್‌ಡಿಎ ವ್ಯವಸ್ಥಿತ ಕುತಂತ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ರಾಜ್ಯ ಸಂಚಾಲಕ ಕೆ.ಎಂ. ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಮಣ್ಣ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳಲಾಗಿದೆ. ಅಕ್ರಮ ಡಿನೋಟಿಫೀಕೇಷನ್ ಮಾಡಿ ಜಾಮೀನಿನ ಮೇಲೆ ಹೊರಗಡೆ ಇರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.ಬಡ ಜನರ ಅಭ್ಯುದಯಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿರುವುದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಬಲ್ಲ ನಾಯಕರಾಗಿ ಸಿದ್ದರಾಮಯ್ಯ ಜನಪ್ರಿಯರಾಗಿದ್ದಾರೆ. ಇದನ್ನು ತಡೆಯಲು ಕಮಲ-ದಳ ಮೈತ್ರಿ ಮುಖಂಡರು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಡಾ ನಿವೇಶನ ಹಂಚಿಕೆಗೆ ಯಾವುದೇ ಶಿಫಾರಸು ಮಾಡಿಲ್ಲ. ಪಾರ್ವತಿ ಸಿದ್ದರಾಮಯ್ಯ ಅವರ ಪತ್ನಿ ಎನ್ನುವ ಕಾರಣಕ್ಕಾಗಿಯೇ ಅಧಿಕಾರ ದುರುಪಯೋಗ ಆಗಿದೆ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯಪಾಲರು ಖಾಸಗಿ ದೂರಿನ ತನಿಖೆಗೆ ಅನುಮತಿ ನೀಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.ದೆಹಲಿಯು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಂತ್ಯಗೊಳಿಸಲು ಬಿಜೆಪಿ ರಾಜಭವನವನ್ನು ದುರ್ಬಳಕೆ ಬಳಸಿಕೊಂಡಿದೆ. ಬಿಜೆಪಿ ಮುಖಂಡರ ಹಿಂಬಾಗಿಲಿನ ಕುತಂತ್ರ ರಾಜಕಾರಣ ಕರ್ನಾಟಕದಲ್ಲಿ ಫಲಿಸುವುದಿಲ್ಲ ಎಂದು ಹೇಳಿದರು.
ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಅಂಜನಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಗ್ರಾಮಾಂತರ ಅಧ್ಯಕ್ಷ ಎಂ. ಬೈರೇಗೌಡ, ಮುಖಂಡರಾದ ರೇವತಿ ಅನಂತರಾಮ್, ಬಿ.ಮುನಿರಾಜು, ವಿನೋದಕುಮಾರ್, ರಾಧಾ, ಮಾಧವಿ, ರಾಘವ, ಶಶಿಕಲಾ, ನಗರಸಭೆ ಸದಸ್ಯರಾದ ಆನಂದ್, ಎಚ್.ಎಸ್. ಶಿವಶಂಕರ್, ಚಂದ್ರಮೋಹನ್, ಕಾಂತರಾಜ್, ಶಿವು, ಶ್ರೀನಗರ ಬಷೀರ್, ಕುರುಬರಹಳ್ಳಿ ಕೆಂಪಣ್ಣ, ಬಾಶೆಟ್ಟಿಹಳ್ಳಿ ರಾಜಣ್ಣ ಇದ್ದರು.