ಸಾರಾಂಶ
ಫೋಟೋ- 28ಎಂವೈಎಸ್39----ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ ಜನರು ಲೋಕಾಯುಕ್ತದ ಮೇಲೆ ನಂಬಿಕೆ ಕಳೆದುಕೊಂಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ಹಾಗೂ ಇಡಿ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಅಕ್ರಮ ಪ್ರಕರಣವು ಲೋಕಾಯುಕ್ತದಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಲೋಕಾಯುಕ್ತದ ಬಗ್ಗೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಸತ್ಯಾಂಶ ಹೊರ ಬರುವುದಿಲ್ಲ. ಹೀಗಾಗಿ, ಸಿಬಿಐ ಹಾಗೂ ಇ.ಡಿ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.ಸಿದ್ದರಾಮಯ್ಯ ಕೇರ್ ಲೆಸ್ ಪರ್ಸನ್ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓರ್ವ ಕೇರ್ ಲೆಸ್ ಪರ್ಸನ್. ಇವರ ಬೇಜವಾಬ್ದಾರಿಯಿಂದಲೇ ಇಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಸಿದ್ದರಾಮಯ್ಯನ ಕಾಲ ವಿಜಯನಗರ ಸಾಮ್ರಾಜ್ಯದ ಆಡಳಿತದಂತಿದೆ. ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನ ಕೇವಲ 1 ಸಾವಿರಕ್ಕೆ ಸಿಗುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೂ ಇದೇ ರೀತಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.ಸಿದ್ದರಾಮಯ್ಯ ಮಾತೆತ್ತಿದರೆ ನಾನು ಅಕ್ಕಿ ಕೊಟ್ಟೆ ಎನ್ನುತ್ತಾರೆ. ಆದರೆ, ದೇವರಾಜ ಅರಸು ಅವರು ಅಕ್ಕಿ ಬೆಳೆಯುವ ಭೂಮಿಯನ್ನೇ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಿದ್ದರಾಮಯ್ಯ ಮೊದಲ ಬಾರಿ ಕೊಟ್ಟ ಆಡಳಿತವನ್ನು ಈಗ ಕೊಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.ಚನ್ನಪಟ್ಟಣ ಜೆಡಿಎಸ್ ಪೂರಕ ವಾತಾವರಣರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮೇಲೆ ಮುಡಾ, ವಾಲ್ಮೀಕಿ ನಿಗಮ ಹಗರಣಗಳ ಕಾರ್ಮೋಡ ಕವಿದಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಗೆ ಪೂರಕ ವಾತಾವರಣವಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಮೆಗಾಸಿಟಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ವಂಚನೆಗೊಳಗಾದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ನಿಖಿಲ್ ಗೆಲುವು ಸಾಧಿಸಲಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಅವರು ಭವಿಷ್ಯ ನುಡಿದರು.----ಬಾಕ್ಸ್...ಬೈರತಿ ಸುರೇಶ್ ಅಯೋಗ್ಯ: ವಿಶ್ವನಾಥ್ ವಾಗ್ದಾಳಿಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಸಚಿವ ಬೈರತಿ ಸುರೇಶ್ ಕೀಳಾಗಿ ಮಾತನಾಡಿದ್ದಾನೆ. ಈತ ಒಬ್ಬ ಅಯೋಗ್ಯ, ಸಂಸ್ಕೃತಿ, ಸಂಸ್ಕಾರ ಇಲ್ಲದ ಮನುಷ್ಯ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.ಶೋಭಾ ಕರಂದ್ಲಾಜೆ ಸುಸಂಸ್ಕೃತ ಹೆಣ್ಣು ಮಗಳು. ಕೇಂದ್ರ, ರಾಜ್ಯದಲ್ಲಿ ಸಚಿವೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಂಥವರಿಂದ ಸಿದ್ದರಾಮಯ್ಯ ಅವರ ಘನತೆ ಹಾಳಾಗುತ್ತಿದೆ. ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಟ್ಟಿದ್ದಾರೆ. ನನ್ನ ಬಗ್ಗೆಯೂ ಬೈರತಿ ಸುರೇಶ್ ಕೇವಲವಾಗಿ ಮಾತನಾಡಿದ್ದಾನೆ. ಇವನನ್ನು ಒದ್ದು ಒಳಗೆ ಹಾಕಬೇಕಿತ್ತು. ಸಿದ್ದರಾಮಯ್ಯ ಬೆಂಬಲದಿಂದ ಎಗರಾಡುತ್ತಿದ್ದಾನೆ ಎಂದು ಅವರು ಕಿಡಿಕಾರಿದರು.ಸಿದ್ದರಾಮಯ್ಯನನ್ನು ಜೆಡಿಎಸ್ ನಿಂದ ಹೊರ ಹಾಕಿದ್ದರು. ಅವರು ಬೀದಿ ಪಾಲಾಗಿದ್ದಾಗ ಕಾಂಗ್ರೆಸ್ ಗೆ ಕರೆ ತಂದವರು ನಾವು. ಸಿದ್ದರಾಮಯ್ಯ ಆಗ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದರು. ಆದರೆ, ಕಾಂಗ್ರೆಸ್ ಗೆ ಬಂದು ಸಿದ್ದರಾಮಯ್ಯ ಸಿಎಂ ಆದದ್ದು ವಿಪರ್ಯಾಸ ಎಂದರು.