ಡಾ.ಎಸ್‌.ಎನ್‌.ಡಿ. ಪೂಜಾರಿ ಅವರು ಬರೆದಿರುವ ಸಾಹಿತಿ, ಲೇಖಕ ಮುದ್ದು ಮೂಡುಬೆಳ್ಳೆಯವರ ಜೀವನ ಕಥನ ‘ಎ ಬಯೊಗ್ರಾಫಿಕಲ್‌ ಸ್ಕೆಚ್‌ ಆಫ್‌ ಮುದ್ದು ಮೂಡುಬೆಳ್ಳೆ’ ಎಂಬ ಆಂಗ್ಲ ಕೃತಿ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡಿತು.

ಮಂಗಳೂರು: ಡಾ.ಎಸ್‌.ಎನ್‌.ಡಿ. ಪೂಜಾರಿ ಅವರು ಬರೆದಿರುವ ಸಾಹಿತಿ, ಲೇಖಕ ಮುದ್ದು ಮೂಡುಬೆಳ್ಳೆಯವರ ಜೀವನ ಕಥನ ‘ಎ ಬಯೊಗ್ರಾಫಿಕಲ್‌ ಸ್ಕೆಚ್‌ ಆಫ್‌ ಮುದ್ದು ಮೂಡುಬೆಳ್ಳೆ’ ಎಂಬ ಆಂಗ್ಲ ಕೃತಿ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡಿತು.

ವಿಶ್ರಾಂತ ಕುಲಪತಿ, ತುಳು ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಬಹುತ್ವ ಅನ್ನುವುದು ಶೋಕೇಸ್‌ನಲ್ಲಿ ಇಟ್ಟ ಅವಯವಗಳಲ್ಲ. ಅದು ವಿವಿಧ ಜಾತಿ, ಧರ್ಮ, ಸಮುದಾಯ, ಭಾಷೆ ಇವೆಲ್ಲವೂ ಒಂದರ ಜತೆ ಇನ್ನೊಂದು ಸೇರಿ ಬದುಕುವುದಾಗಿದೆ ಎಂದರು.ಕರಾವಳಿಯನ್ನು ಬಹುಭಾಷೆಯ ಆಡೊಂಬಲ ಎಂದು ಕರೆಯುತ್ತೇವೆ. ಬಹುತ್ವ ಎನ್ನುವುದು ಕೇವಲ ಪ್ರದರ್ಶನವಲ್ಲ. ಸಾಹಿತ್ಯದಲ್ಲಿಯೂ ಬಹುತ್ವ ಬೆರೆತುಕೊಂಡಾಗ ಅದು ನಿಜವಾದ ಸಾಹಿತ್ಯದ ಸಮನ್ವಯವಾಗುತ್ತದೆ. ಅಂತಹ ಸಮನ್ವಯವನ್ನು ಯಾವುದೇ ದೊಡ್ಡ ಮಾತುಗಳಿಲ್ಲದೆ ಮುದ್ದು ಮೂಡುಬೆಳ್ಳೆ ಬರೆದಿದ್ದಾರೆ ಎಂದು ಪ್ರೊ. ವಿವೇಕ್‌ ರೈ ಹೇಳಿದರು.

ನಿಜವಾದ ಲೇಖಕರ ಅನುಭವದ ಮೂಟೆ ಅವರ ಬೆನ್ನ ಹಿಂದೆ ಇರುತ್ತದೆ. ಮುದ್ದು ಮೂಡುಬೆಳ್ಳೆಯವರಲ್ಲಿ ಆ ತರಹದ ಅನುಭವ ಇದೆ ಎಂದು ಪ್ರೊ. ವಿವೇಕರ ರೈ ವಿಶ್ಲೇಷಿಸಿದರು.

ಒಂದು ಊರಿನ ಪ್ರಾಮುಖ್ಯತೆಯು ಆ ಊರಿನ ಕೆಲ ವ್ಯಕ್ತಿಗಳ ಸಾಧನೆಯಿಂದಲೂ ಮಹತ್ವವನ್ನು ಪಡೆಯುತ್ತದೆ. ಅಂತಹ ಅನೇಕರಿದ್ದು, ಅವರಲ್ಲಿ ಮುದ್ದು ಮೂಡುಬೆಳ್ಳೆಯವರೂ ಪ್ರಮುಖರು ಎಂದು ಪ್ರೊ. ವಿವೇಕ ರೈ ಶ್ಲಾಘಿಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್‌. ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಡ್ದಾನದೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಕಸಪಾ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್‌ ಎಂ.ಪಿ., ಸಾಹಿತಿ ಚಂದ್ರಕಲಾ ನಂದಾವರ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಸುಖಾಲಾಕ್ಷಿ ವೈ. ಸುವರ್ಣ, ಲತೀಶ್‌ ಪಾಲ್ದನೆ, ಹೆನ್ರಿ ಎಂ. ಪೆರ್ನಾಲ್‌, ಗೀತಾ ಲಕ್ಷ್ಮೇಶ್‌ ಮತ್ತಿತರರು ಇದ್ದರು. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಕಲ್ಲೂರ ನಾಗೇಶ ನಿರೂಪಿಸಿದರು.