ಸಾರಾಂಶ
ಕಾರಟಗಿ: ಪಟ್ಟಣದಿಂದ ಚೆಳ್ಳೂರು-ಹಗೇದಾಳ ಮೂಲಕ ಗಂಗಾವತಿಗೆ ತೆರಳುವ ಜಿಲ್ಲೆಯ ಪ್ರಮುಖ ರಸ್ತೆ ಕೆಸರು ಗದ್ದೆಯಂತಾಗಿದ್ದು, ಕೂಡಲೇ ರಿಪೇರಿ ಕಾಮಗಾರಿ ಮಾಡಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ರೈತರು ರಸ್ತೆಯಲ್ಲಿ ಬತ್ತದ ಸಸಿ ನಾಟಿ ಮಾಡಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚಳ್ಳೂರುಕ್ಯಾಂಪ್ ಹಾಗೂ ಚಳ್ಳೂರು ಗ್ರಾಮದ ಮೂಲಕ ಹಾದು ಗಂಗಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು, ತಗ್ಗು-ಗುಂಡಿಗಳಿಂದ ತುಂಬಿಕೊಂಡಿದೆ. ಈ ರಸ್ತೆ ದುರಸ್ತಿ ಕಾರ್ಯ ಕೂಡಲೇ ಮಾಡುವಂತೆ ಒತ್ತಾಯಿಸಿ, ಜನಪ್ರತಿನಿಧಿಗಳ ಮತ್ತು ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳು ರಸ್ತೆ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ನಡೆಸಿದರು.ಬತ್ತದ ಸಸಿ ಮಡಿಗಳನ್ನು ತಂದು ಪ್ರತಿಭಟನೆ ನಡೆಸಿದ ರೈತರು, ಮೊದಲು ರಸ್ತೆ ನಿರ್ಮಿಸಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಎಂದು ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಮೂಲೆ ಇರುವ ಗುಂಡಿಗಳಲ್ಲಿ ಮತ್ತು ನಿಂತ ನೀರಿನಲ್ಲಿ ಸಸಿ ಮಡಿಗಳನ್ನು ನಾಟಿ ಮಾಡಿದರು.
ಕಾರಟಗಿ ಮೂಲಕ ಬರುವ ಈ ರಸ್ತೆ ಸಂಪೂರ್ಣ ನೀರಾವರಿ ಪ್ರದೇಶದ ಹಳ್ಳಿಗಳಲ್ಲಿಯೇ ಹಾದು ಹೋಗಿ ಗಂಗಾವತಿ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಚಳ್ಳೂರು ಕ್ಯಾಂಪ್, ಚಳ್ಳೂರು, ಹಗೇದಾಳ, ತೊಂಡಿಹಾಳ, ಸಿಂಗನಾಳ, ಹಣವಾಳ ಬಹುದೊಡ್ಡ ಗ್ರಾಮಗಳು ಬರುತ್ತವೆ. ನಿತ್ಯ ಸಾವಿರಾರೂ ವಾಹನಗಳು, ಬತ್ತ ಮತ್ತು ಅಕ್ಕಿ ಸಾಗಿಸುವ ಲಾರಿಗಳು ಓಡಾಡುತ್ತವೆ. ಜಿಲ್ಲಾ ಪ್ರಮುಖ ರಸ್ತೆಯೆಂದು ಇದನ್ನು ಗುರುತಿಸಲಾಗಿದ್ದು, ಇಂಥ ರಸ್ತೆ ಇದೀಗ ಕೆಸರು ಗದ್ದೆಯಂತಾಗಿದೆ. ಕೇವಲ ಅರ್ಧ ಗಂಟೆಯಲ್ಲಿ ಗಂಗಾವತಿ ತಲುಪಬೇಕಾದವರಿಗೆ ಈಗ ಸುಮಾರು ಎರಡು ಗಂಟೆ ಆಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಮ ರ್‍ಯಾವಳದ್ ಮಾತನಾಡಿ, ರಸ್ತೆಯ ಡಾಂಬರ್ ಕಿತ್ತು ರಸ್ತೆಯುದ್ದಕ್ಕೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ. ಬರೀ ತಗ್ಗು-ಗುಂಡಿಗಳ ತುಂಬಿಕೊಂಡಿರುವ ರಸ್ತೆಯಲ್ಲಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ತಗ್ಗು-ಗುಂಡಿಗಳು ನಿರ್ಮಾಣವಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಚಿವ ಶಿವರಾಜ ತಂಗಡಗಿ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಈ ರಸ್ತೆಯನ್ನು ತಿಂಗಳೊಳಗಾಗಿ ದುರಸ್ತಿ ಮಾಡದಿದ್ದರೆ, ಶಿವರಾಜ ತಂಗಡಗಿ ಅವರು ಮುಂದೆ ನಡೆಸುವ ಎಲ್ಲ ಕಾರ್ಯಕ್ರಮಗಳಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಂಘದ ಗ್ರಾಮ ಘಟಕದ ಸುರೇಶ ಚಳ್ಳೂರು ಮಾತನಾಡಿ, ಒಂದೂವರೆ ವರ್ಷಗಳ ಹಿಂದೆ ಅಂದಿನ ಶಾಸಕ ಬಸವರಾಜ್ ದಢೇಸೂಗೂರು ಆಡಳಿತದ ಅವಧಿಯಲ್ಲಿಯೇ ಹದಗೆಟ್ಟು ಹೋಗಿದ್ದ ರಸ್ತೆಯಲ್ಲಿ ಇದೇ ರೀತಿ ಸಸಿ ನೆಟ್ಟು ಪ್ರತಿಭಟಿಸಲಾಗಿತ್ತು. ಆನಂತರ ನಡೆದ ಚುನಾವಣೆ ಸಂದರ್ಭದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸುವುದೆ ನನ್ನ ಮೊದಲ ಆದ್ಯತೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದರು. ಇಲ್ಲಿಯವರೆಗೂ ಮಾತು ಈಡೇರಿಸಿಲ್ಲ. ನಿತ್ಯ ವ್ಯಾಪಾರ ವಹಿವಾಟು, ತಾಲೂಕು ಕಚೇರಿಗಳಿಗೆ ಓಡಾಡುವ ಸಾವಿರಾರು ಜನರಿಗೆ ನರಕಯಾತನೆ ತಪ್ಪಿಲ್ಲ.ಚುನಾವಣೆಯಲ್ಲಿ ಭರವಸೆ ನೀಡಿದ್ದ ಸಚಿವರಿಗೆ ಈ ಬಗ್ಗೆ ಪದೇ ಪದೇ ಮನವಿ ಮಾಡಿಕೊಂಡರೂ ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ. ಆದರೆ ತಿಂಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲೇ ಸಚಿವರು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ದೊಡ್ಡ ಹೋರಾಟ ಮಾಡಲಾಗುವುದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹೇಶ ಮೇಟಿ, ಮಂಜು ರ್‍ಯಾವಳದ್, ಶಿವಕುಮಾರ ಪಾಟೀಲ್, ಮಹದೇವ ಸುಬೇದಾರ್, ರಮೇಶ ನಾಲ್ಕೆತ್ತಿನ, ಪಂಪಣ್ಣ ಮೇಟಿ, ಚಂದ್ರಶೇಖರ ದೇಸಾಯಿ, ಬಸವರಾಜ ಗಣೇಕಲ್, ವೀರೇಶ ಭೋವಿ, ಗುರುರಾಜ ಶ್ರೇಷ್ಠಿ. ಪಂಪಾಪತಿ ಟಿ., ಲಿಂಗಪ್ಪ ಕುರುಬರ, ಶರಣಪ್ಪ ಗಣೇಕಲ್, ಹನುಮೇಶ ಮೇಟಿ, ಸೋಫಿಸಾಬ್, ನಬಿಸಾಬ್, ಖಾದರಸಾಬ್, ಚಂದುಸಾಬ್, ನೂರಸಾಬ್, ರಹೀಮ್ ಸಾಬ್ ಇನ್ನಿತರರು ಇದ್ದರು.