ಕೆಸರು ಗದ್ದೆಯಾದ ರಸ್ತೆ, ತಹಸೀಲ್ದಾರ ಕಾರಿಗೆ ಮುತ್ತಿಗೆ

| Published : Jul 21 2024, 01:19 AM IST

ಕೆಸರು ಗದ್ದೆಯಾದ ರಸ್ತೆ, ತಹಸೀಲ್ದಾರ ಕಾರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶೀಘ್ರದಲ್ಲಿ ನಗರೋತ್ಥಾನ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ನೊಟೀಸ್ ನೀಡುವ ಮೂಲಕ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಲವು ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗಳು ಕಳೆದ ವರ್ಷಗಳ ಹಿಂದೆ ಭೂಮಿ ಪೂಜೆ ನೆರವೇರಿಸಿ ರಸ್ತೆ ಅಗೆದು ಕಾಮಗಾರಿ ಪ್ರಾರಂಭಿಸದೆ ಹಾಗೇ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿವೆ ಎಂದು ಸಾರ್ವಜನಿಕರು ದೂದಪೀರಾ ದರ್ಗಾದ ಹತ್ತಿರ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ದೂದಪೀರಾ ದರ್ಗಾದ ಹತ್ತಿರ ಆಕಸ್ಮಿಕವಾಗಿ ಅದೇ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ತಹಸೀಲ್ದಾರ ವಾಸುದೇವ ಸ್ವಾಮಿ ಕಾರನ್ನು ತಡೆದ ಪ್ರತಿಭಟನಾಕಾರರು ತಮಗೆ ನ್ಯಾಯ ಬೇಕು ಎಂದು ಪುರಸಭೆಯ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಂಜುನಾಥ ಮಾಗಡಿ ಮಾತನಾಡಿ, ಪುರಸಭೆ ಆಡಳಿತ ಮಂಡಳಿಯು ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದ ಹಲವು ರಸ್ತೆಗಳ ಕಾಮಗಾರಿ ಆರಂಭಿಸಿ ಅರ್ಧಕ್ಕೆ ಮಾಡಿ ಹಾಗೆ ಬಿಟ್ಟಿದ್ದಾರೆ. ಇದರಿಂದ ಈಗ ಮಳೆಗಾಲದಲ್ಲಿ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗಿದ್ದು, ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಸಾಧ್ಯದ ಮಾತಾಗಿದೆ. ಗುತ್ತಿಗೆದಾರರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದರಿಂದ ತಾವುಗಳು ಶೀಘ್ರದಲ್ಲಿ ನಗರೋತ್ಥಾನ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ನೊಟೀಸ್ ನೀಡುವ ಮೂಲಕ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಈ ವೇಳೆ ತಹಸೀಲ್ದಾರ್‌ ವಾಸುದೇವ ಸ್ವಾಮಿ ಮಾತನಾಡಿ, ಗುತ್ತಿಗೆದಾರರೊಂದಿಗೆ ಈಗ ಮಾತನಾಡಿದ್ದೇನೆ. 2-3 ದಿನಗಳಲ್ಲಿ ಖಡೀಕರಣ ಮಾಡಿ ಮಹರಂ ಹಾಕುವ ಕಾರ್ಯ ಮಾಡಲು ತಿಳಿಸಿದ್ದೇನೆ. ಇಲ್ಲವಾದಲ್ಲಿ ಅವರಿಗೆ ನೊಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದ ನಂತರ ಡಾಂಬರ್ ಹಾಕುವ ಕಾರ್ಯ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದೇನೆ ಎಂದರು. ಅಷ್ಟಕ್ಕೆ ಸುಮ್ಮನಾದ ಪ್ರತಿಭಟನಾಕಾರರು ಪ್ರತಿಭಟನೆ ವಾಪಾಸ್ ಪಡೆದುಕೊಂಡ ಘಟನೆ ನಡೆಯಿತು.

ಈ ವೇಳೆ ಸುಭಾನಸಾಬ್‌ ಹೊಂಬಳ, ಆಭಯಕುಮಾರ ಜೈನ್‌, ಚಂದ್ರು ಮಾಗಡಿ, ಮಲ್ಲಿಕಾರ್ಜುನ ಅಣ್ಣಿಗೇರಿ, ಮುತ್ತು ನೀರಲಗಿ, ಮಲ್ಲಿಕಾರ್ಜುನ ನಿರಾಲೋಟಿ, ಮಹಾಂತೇಶ ಉಮಚಗಿ, ಮಲ್ಲು ಅಂಕಲಿ, ಫಕ್ಕೀರೇಶ ಭಜಂತ್ರಿ, ಹುಲಿಗೆಪ್ಪ ಭಜಂತ್ರಿ, ಗಿರಿಜಮ್ಮ ಕರೆಯತ್ತಿನ, ನೀಲವ್ವ ಕೊಂಗಿ, ಶೈಲವ್ವ ಹಳ್ಳಿಕೇರಿ, ನೀಲವ್ವ ಹಳ್ಳಿಕೇರಿ, ಪಾರ್ವತೆವ್ವ ಬೇವಿನಮರದ, ಶ್ವೇತಾ ರೋಣದ, ಚನ್ನವ್ವ ರೋಣದ, ಲಕ್ಷ್ಮವ್ವ ಬೇವಿನಮರದ, ಶೇಕವ್ವ ನೂಲ್ವಿ, ನೀಲವ್ವ ಹುಲಕೋಟಿ ಇದ್ದರು.