ಮುದೋಳ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

| Published : Jun 13 2024, 12:45 AM IST

ಸಾರಾಂಶ

ಮುಧೋಳ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸುವಂತೆ ಆಗ್ರಹಿಸಿ ನಗರಸಭೆಯ ಬಿಜೆಪಿ ಸದಸ್ಯರು ಗುರುವಾರ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸುವಂತೆ ಆಗ್ರಹಿಸಿ ನಗರಸಭೆಯ ಬಿಜೆಪಿ ಸದಸ್ಯರು ಗುರುವಾರ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ನಗರಸಭೆ ಮೊದಲನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಮುಗಿದು 13 ತಿಂಗಳಾದರೂ ಎರಡನೇ ಅವಧಿಯ ಮೀಸಲಾತಿ ಇನ್ನೂ ಪ್ರಕಟವಾಗಿಲ್ಲ. ಇದರಿಂದ ನಗರದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ ಎಂದು ದೂರಿದರು.

ನಗರಸಭೆ ಬಿಜೆಪಿ ಸದಸ್ಯ, ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಮಾತನಾಡಿ, ನಗರಸಭೆ ಸದಸ್ಯರಿಗೆ ಅಧಿಕಾರವಿದ್ದೂ ಇಲ್ಲದಂತಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ. ಇದರಿಂದ ಒಂದು ವರ್ಷದಿಂದ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ನಿರ್ಣಯ ಕೈಗೊಳ್ಳಲು, ಹಣಕಾಸಿನ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು.

ನಗರಸಭೆ ಸದಸ್ಯೆ, ಮಾಜಿ ಅಧ್ಯಕ್ಷೆ ಸ್ವಾತಿ ಸತೀಶ ಕುಲಕರ್ಣಿ ಮಾತನಾಡಿ, ಮುಧೋಳ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲದಿರುವುದರಿಂದ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕರ ಮೂಲ ಸೌಲಭ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನಗರದ ಸಾರ್ವಜನಿಕರು ಜನಪ್ರತಿನಿಧಿಗಳ ಮಂದೆ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರೂ ಅಸಹಾಯಕರಾಗಿದ್ದೇವೆ. ಕೂಡಲೇ ಎರಡನೇ ಅವಧಿಗಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ, ಸೋನಾಪ್ಪಿ ಕುಲಕರ್ಣಿ, ಪುಂಡಲೀಕ ಬೋವಿ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ, ಸಂಗಣ್ಣ ಕಾತರಕಿ, ರಾಜು ಟಂಕಸಾಲಿ, ಬಸು ದಾಸರ, ಬಸವರಾಜ ಮಹಾಲಿಂಗೇಶ್ವರ ಮಠ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ನಗರಸಭೆ ಎರಡನೇ ಅವಧಿಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸುವಂತೆ ಒತ್ತಾಯಿಸಿ, ನಗರಸಭೆ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.

ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ನಗರಸಭೆ ಸದಸ್ಯರಾದ ಗುರುಪಾದ ಕುಳಲಿ, ಸ್ವಾತಿ ಕುಲಕರ್ಣಿ, ಸುನೀತಾ ಬೋವಿ, ಸುರೇಶ ಕಾಂಬಳೆ, ಸುನೀಲ ನಿಂಬಾಳ್ಕರ, ವಿನೋದ ಕಲಾಲ, ಕುಮಾರ ಪಮ್ಮಾರ, ಯಲ್ಲವ್ವ ಅಂಬಿ, ಪಾರ್ವತಿ ಹರಗಿ, ಲೀಲಾಬಾಯಿ ರಜಪೂತ, ಲಕ್ಷ್ಮೀ ದಾಸರ, ಸದಾಶಿವ ಜೋಶಿ, ಗಾಯತ್ರಿ ಸಿಂಗಾಡೆ, ಲಕ್ಷ್ಮೀ ಮಾನೆ, ಶಾಂತಾ ಮಡಿವಾಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.