ಮುದ್ರಾಡಿ ರೈತ ಮಹಿಳೆ ಸೌರಶಕ್ತಿ ಆಧರಿತ ಕೃಷಿ ಪಂಪ್‌ಸೆಟ್‌ ಅಳವಡಿಕೆ

| Published : Oct 29 2025, 11:15 PM IST

ಮುದ್ರಾಡಿ ರೈತ ಮಹಿಳೆ ಸೌರಶಕ್ತಿ ಆಧರಿತ ಕೃಷಿ ಪಂಪ್‌ಸೆಟ್‌ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 24 ಎಕರೆ ಕೃಷಿ ಭೂಮಿಯ ಮಾಲಕಿ ಶೃತಿ, ಹೈನುಗಾರಿಕೆಯ ಜೊತೆಗೆ ತೆಂಗು, ಅಡಕೆ, ಕಾಳುಮೆಣಸು, ಕಾಫಿ, ಜಾಯಿಕಾಯಿ ಮತ್ತು ಹಣ್ಣುಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ. ವಾರ್ಷಿಕವಾಗಿ ಉತ್ತಮ ಇಳುವರಿ ಪಡೆಯುತ್ತಿರುವ ಇವರು, ಸೌರವಿದ್ಯುತ್ ಪಂಪ್ ಬಳಸಿ ಪರಿಸರ ಸ್ನೇಹಿ ಕೃಷಿಯತ್ತ ಗಮನ ಹರಿಸಿದ್ದಾರೆ.

ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ ರೈತರಿಗೆ ವರದಾನ

ರಾಂ ಅಜೆಕಾರು

ಕಾರ್ಕಳ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಉಪ್ಪಳದ ಶೃತಿ ಆರ್. ಭಟ್ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ ಸಹಾಯದಿಂದ ಶಾಶ್ವತ ಕೃಷಿ ಮಾದರಿ ರೂಪಿಸಲು ಮುಂದಾಗಿದ್ದಾರೆ.ಸುಮಾರು 24 ಎಕರೆ ಕೃಷಿ ಭೂಮಿಯ ಮಾಲಕಿ ಶೃತಿ, ಹೈನುಗಾರಿಕೆಯ ಜೊತೆಗೆ ತೆಂಗು, ಅಡಕೆ, ಕಾಳುಮೆಣಸು, ಕಾಫಿ, ಜಾಯಿಕಾಯಿ ಮತ್ತು ಹಣ್ಣುಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ. ವಾರ್ಷಿಕವಾಗಿ ಉತ್ತಮ ಇಳುವರಿ ಪಡೆಯುತ್ತಿರುವ ಇವರು, ಪರಿಸರ ಸ್ನೇಹಿ ಕೃಷಿಯತ್ತ ಗಮನ ಹರಿಸಿದ್ದಾರೆ.

ಇತ್ತೀಚೆಗೆ 3 ಎಕರೆಯ ಭತ್ತದ ಕೃಷಿಗಾಗಿ ಸೌರಶಕ್ತಿ ಪಂಪ್‌ಸೆಟ್ ಅಳವಡಿಸಿರುವ ಶೃತಿ, ಇದರ ನೆರವಿನಿಂದ ನವೆಂಬರ್‌ನಲ್ಲಿ ಭತ್ತ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಉಳಿದ ತಿಂಗಳಲ್ಲಿ ಎಳ್ಳು, ಉದ್ದು, ಧಾನ್ಯ ಹಾಗೂ ಬಾಳೆ ಬೆಳೆಗಳನ್ನು ಬೆಳೆಸುವ ಮೂಲಕ ಭೂಮಿಯ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಈ ಪಂಪ್‌ಸೆಟ್ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಯಡಿ, ತೋಟಗಾರಿಕಾ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ನೀಡಲಾಗುವ ವಿಶೇಷ ಉತ್ತೇಜನ ಮಾಡುವ ಸಲುವಾಗಿ ಅಳವಡಿಸಲಾಗಿದೆ.ಸೌರ ಪಂಪ್ ಬಾವಿಗೆ ಅಳವಡಿಸಲಾಗಿದ್ದು, ಹಗಲಿನಲ್ಲಿ ಬೆಳಗ್ಗೆ 7ರಿಂದ ಸಂಜೆವರೆಗೆ ನಿರಂತರ ನೀರಾವರಿ ನೀಡಲು ಸಾಧ್ಯವಾಗಿದೆ. ಸಾಂಪ್ರದಾಯಿಕ ವಿದ್ಯುತ್ ಪಂಪ್‌ಗಳಿಗಿಂತ ಈ ಪಂಪ್ ಹೆಚ್ಚು ದೀರ್ಘ ಬಾಳಿಕೆ, ಶಬ್ದರಹಿತ ಹಾಗೂ ಕಡಿಮೆ ನಿರ್ವಹಣೆ ಅಗತ್ಯವಿರುವುದು ಇದರ ವಿಶೇಷತೆ.

ಸೌರಶಕ್ತಿಯ ಬಳಕೆಯಿಂದ ವಿದ್ಯುತ್ ಖರ್ಚು ಹಾಗೂ ಆರ್ಥಿಕ ಭಾರವು ಕಡಿಮೆಯಾಗಿದೆ. ಸರ್ಕಾರಿ ಯೋಜನೆಯಡಿ 3 ಹಾರ್ಸ್‌ಪವರ್‌ ಸೌರ ಪಂಪ್ ಅಳವಡಿಸಿರುವ ಶೃತಿಗೆ ಶೇ.50ರಷ್ಟು ಸಹಾಯಧನ ದೊರೆತಿದ್ದು, ಐದು ವರ್ಷಗಳ ಕಾಲ ವಿಮೆ ಮತ್ತು ನಿರ್ವಹಣಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.ಶೃತಿ ಅವರ ಕೃಷಿ ಕಾರ್ಯಗಳಲ್ಲಿ ಪತಿ ರಾಘವೇಂದ್ರ ಭಟ್ ಅವರ ಬೆಂಬಲ ದೊರಕುತ್ತಿದ್ದು, ಇವರ ಕೃಷಿ ಕ್ರಮವು ಇತರೆ ರೈತರಿಗೆ ಪ್ರೇರಣೆಯಾದಂತಾಗಿದೆ. ಸೌರಶಕ್ತಿ ಪಂಪ್ ಬಳಸಿ ಹಗಲಿನ ವೇಳೆ ನೀರಾವರಿ ನಡೆಸುವುದರಿಂದ ವಿದ್ಯುತ್ ಅವಲಂಬನೆ ಸಂಪೂರ್ಣ ಕಡಿಮೆಯಾಗಿದ್ದು, ಅಕ್ಟೋಬರ್‌ನಿಂದ ಮೇವರೆಗೂ ನಿರಂತರ ನೀರಾವರಿ ಸಾಧ್ಯವಾಗಿದೆ.ಯೋಜನೆಗೆ ಸಂಬಂಧಿಸಿದ ಷರತ್ತುಗಳು:ಅರ್ಜಿದಾರರು ತೋಟಗಾರಿಕಾ ಬೆಳೆಗಾರರಾಗಿರಬೇಕು, ಅವರ ಹೆಸರಿನಲ್ಲಿ ಆದಾರ್ ಕಾರ್ಡ್ ಹಾಗೂ ಪಹಣಿ ದಾಖಲೆ ಇರಬೇಕು.ಕನಿಷ್ಠ ಅರ್ಧ ಎಕರೆ ಜಮೀನನ್ನು ಹೊಂದಿರುವ ರೈತರಾಗಿರಬೇಕು.ಈ ಯೋಜನೆಯಡಿ 3 ಎಚ್‌.ಪಿ. ಸೌರ ಪಂಪ್‌ಸೆಟ್‌ಗೆ ಘಟಕ ವೆಚ್ಚ ರೂ 2 ಲಕ್ಷದ ಶೇ.50ರಷ್ಟು ಸಹಾಯಧನ (1 ಲಕ್ಷ), 5 ಎಚ್‌.ಪಿ. ಸೌರ ಪಂಪ್‌ಸೆಟ್‌ಗೆ ಘಟಕ ವೆಚ್ಚ ರು. 3 ಲಕ್ಷ ಶೇ.50ರಷ್ಟು ಸಹಾಯಧನ (1.5 ಲಕ್ಷ) ಸಹಾಯಧನವಾಗಿ ದೊರಕುತ್ತವೆ.

ಸಹಾಯಧನ ದಡಿ ರೈತರಿಗೆ ಐದು ವರ್ಷದ ಗ್ಯಾರಂಟಿ ಯೊಂದಿಗೆ ಸೋಲಾರ್ ಪಂಪ್, 9 ರಿಂದ 15 ರಷ್ಟು ಸೋಲಾರ್ ಪ್ಯಾನೆಲ್, ಮೌಂಟಿಂಗ್ ಸ್ಟ್ರಕ್ಚರ್, ಚೇಂಜ್ ಒವರ್ ಸ್ವಿಚ್ , ಸಿಡಿಲು ನಿರೋಧಕ ಉಪಕರಣಗಳು ದೊರೆಯುತ್ತದೆ.......................

ತೋಟಗಾರಿಕಾ ಇಲಾಖೆಯ ಸಹಾಯಧನದ ಮೂಲಕ ದೊರೆತ ಈ ಸೌರಪಂಪ್‌ ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಳ್ಳಿಗಳಲ್ಲಿ ಗಾಳಿ ಬಿದ್ದಾಗ ವಿದ್ಯುತ್‌ ಪೂರೈಕೆಯಲ್ಲಿ ಆಗುವ ತೊಂದರೆ ಸಾಮಾನ್ಯ. ಆದರೆ ಸೌರಪಂಪ್‌ನಿಂದ ಈ ಸಮಸ್ಯೆ ನಿವಾರಣೆಯಾಗಿದೆ. ನವೆಂಬರ್‌ನಲ್ಲಿ ಭತ್ತ ಮತ್ತು ತರಕಾರಿ ಬೆಳೆಗಳನ್ನು ಬೆಳೆಸುತ್ತೇವೆ. ಉಳಿದ ತಿಂಗಳಲ್ಲಿ ಎಳ್ಳು, ಉದ್ದು, ಧಾನ್ಯ ಹಾಗೂ ಬಾಳೆ ಬೆಳೆಗಳನ್ನು ಬೆಳೆಯುವ ಮೂಲಕ ಭೂಮಿಯ ಸದುಪಯೋಗ ಮಾಡಿಕೊಳ್ಳುತ್ತಿದ್ದೇವೆ.

-ಶೃತಿ ಆರ್. ಭಟ್, ಉಪ್ಪಳ ಮುದ್ರಾಡಿ.

........................

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗಬಾರದೆಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ಗಳ ಅಳವಡಿಕೆಯಿಂದ ನಿರಂತರ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬಹುದು.

-ಶ್ರೀನಿವಾಸ್ ರಾವ್, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಕಾರ್ಕಳ.