ಸಾರಾಂಶ
ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮ । ಸಿದ್ದರಾಮಯ್ಯ ನನ್ನ ನಾಯಕಕನ್ನಡಪ್ರಭ ವಾರ್ತೆ ಕೊಪ್ಪಳಈಗಲೇ ಏನಾದರೂ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಇರುವವರೆಗೂ ಮುಸ್ಲಿಮರಿಗೆ ಏನಾದರೂ ಸಿಗುತ್ತದೆ. ನಂತರ ಚೊಂಬೆ ಗತಿಯಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.ನಗರದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲ ಮಾತನಾಡಿದ ಇಕ್ಬಾಲ್ ಅನ್ಸಾರಿ, ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ನನಗೆ ಸಿದ್ದರಾಮಯ್ಯ ಮಾತ್ರ ನಾಯಕ. ಅವರನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ. ನನಗೆ ರಾಹುಲ್ ಗಾಂಧಿ, ಸೋನಿಯಾಗಾಂಧಿ ಲೆಕ್ಕಕ್ಕೆ ಇಲ್ಲ. ಸಿದ್ದರಾಮಯ್ಯ ನನ್ನ ನಾಯಕ ಎಂದು ಪದೇ ಪದೇ ಹೇಳಿದರು.ಅವರಿಗೆ ಒಂದು ಕಪ್ಪು ಚುಕ್ಕೆ ಬರದಂತೆ ನಾನು ಇದ್ದೇನೆ, ನಾನು ಅವರ ಬಳಿ ಹೋದರು ಸಹ ಯಾವುದೇ ಒತ್ತಡ ಹಾಕುವುದಿಲ್ಲ. ಪ್ರೀತಿಯಿಂದ ಮಾತನಾಡಿ ಬರುತ್ತೇನೆ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ತಿಂಗಳಿಗೊಮ್ಮೆ ಅವರ ಬಳಿಗೆ ಹೋಗಬೇಕು. ನೂರು ಕೋಟಿ ರುಪಾಯಿ ತರಬೇಕು, ಅಭಿವೃದ್ಧಿ ಮಾಡಬೇಕು. ಕೊಪ್ಪಳ ಕ್ಷೇತ್ರದಲ್ಲಿ ಶೇ. 40 ಮುಸ್ಲಿಮರು ಇದ್ದು, ಅವರು ನಿಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ನೀವು ತರುವ ಅನುದಾನದಲ್ಲಿ ಮುಸ್ಲಿಂ ಸಮಾಜಕ್ಕೂ ಆದ್ಯತೆ ನೀಡಬೇಕು ಎಂದರು.ಟಿಪ್ಪು ಹಿಂದೂಸ್ತಾನದ ಹುಲಿ:ಟಿಪ್ಪು ಜಯಂತಿ ಆಚರಣೆಗೆ ನಿಷೇಧ ಇರುವ ಹಿನ್ನೆಲೆ ಮುಸ್ಲಿಂ ಸಮಾಜದ ವತಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮ ಮಾಡಲಾಯಿತು. ಅದರಲ್ಲಿ ಟಿಪ್ಪು ಸುಲ್ತಾನ ಅವರನ್ನೇ ಪ್ರಮುಖವಾಗಿ ಬಿಂಬಿಸಲಾಯಿತು.ಉಪನ್ಯಾಸಕ ಚಂದ್ರಶೇಖರ ಮಾತನಾಡಿ, ಟಿಪ್ಪು ಇಲ್ಲದೆ ಭಾರತದ ಇತಿಹಾಸ ಇಲ್ಲ. ಟಿಪ್ಪು ಹೊರತಾದ ಇತಿಹಾಸ ಇತಿಹಾಸವೇ ಅಲ್ಲ ಎಂದರು. ಟಿಪ್ಪು ಕೇವಲು ಮೈಸೂರು ಹುಲಿ, ಕರ್ನಾಟಕ ಹುಲಿ ಅಲ್ಲ, ಅವರು ಹಿಂದೂಸ್ತಾನದ ಹುಲಿ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಇಂಡಿಯಾ ಗೇಟ್ ಮೇಲೆ ಬರೆಸಲಾಗಿದೆ. ಅದರಲ್ಲಿ 62 ಸಾವಿರ ಹೆಸರುಗಳು ಇದ್ದು, 38 ಸಾವಿರ ಮುಸ್ಲಿಮರ ಹೆಸರು ಇವೆ ಎಂದರು.ತಡರಾತ್ರಿವರೆಗೂ ಮೆರವಣಿಗೆ:ಮುಸ್ಲಿಂ ಸಮಾಜದ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆ ಶನಿವಾರ ತಡರಾತ್ರಿ ವರೆಗೂ ನಡೆಯಿತು. ಡಿಜೆ ಅಬ್ಬರಿಸಿದವು. ತಡರಾತ್ರಿ 2 ಗಂಟೆಗೆ ಡಿಜೆ ಬಂದ್ ಮಾಡಿಸಿದ ಮೇಲೆಯೇ ಮೆರವಣಿಗೆ ಕೊನೆಗೊಂಡಿತು. ಕೊಪ್ಪಳ ನಗರದ ಸಾಹಿತ್ಯ ಭವನದ ಮೂಲಕ ಪ್ರಮುಖ ಬೀದಿಯುದ್ದಕ್ಕೂ ಭರ್ಜರಿಯಾಗಿ ನಡೆಯಿತು.