ಸಾರಾಂಶ
ಸಂಜೆ ಮೆರವಣಿಗೆಯಲ್ಲಿ ದೇವರುಗಳನ್ನು ಗಾಣಗೇರ ಮನೆಯ ಮುಂದೆ ಸಂಗಮಗೊಂಡು ಪ್ರಾರ್ಥನೆ ಸಲ್ಲಿಸಲಾಯಿತು
ಗದಗ: ತ್ಯಾಗ, ಬಲಿದಾನದ ಪ್ರತೀಕ ಹಾಗೂ ಹಿಂದು ಮುಸ್ಲೀಂರ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಜಿಲ್ಲೆಯಾದ್ಯಂತ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲೆ ದೇವರನ್ನು ಊರಿನ ಪ್ರಮುಖ ರಸ್ತೆಗಳಲ್ಲಿ ಮೆರಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಭಕ್ತರು ಪಂಜಾಗಳಿಗೆ ಪೂಜೆ ಸಲ್ಲಿಸಿದರು.ಲಕ್ಕುಂಡಿಯಲ್ಲಿ ಆಚರಣೆ:
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿಯೂ ಮೊಹರಂ ಆಚರಣೆ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ರಸ್ತೆಯಲ್ಲಿ ದೇವರುಗಳ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜಂದೇಶಾವಲಿ, ಲಾಲಶಾವಲಿ ಮತ್ತು ಮರುಳಸಿದ್ದೇಶ್ವರ ಹೆಜ್ಜೆ ಮೇಳದ ಕುಣಿತವು ವಿವಿಧ ಜಾನಪದಗಳೊಂದಿಗೆ ಗಮನ ಸೆಳೆಯಿತು.ವಿರುಪಾಕ್ಷೇಶ್ವರ ದೇವಸ್ಥಾನದ ಮುಂದೆ ಎಲ್ಲ ದೇವರು ಸಂಗಮಗೊಂಡ ನಂತರ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮತ್ತೆ ಸಂಜೆ ಮೆರವಣಿಗೆಯಲ್ಲಿ ದೇವರುಗಳನ್ನು ಗಾಣಗೇರ ಮನೆಯ ಮುಂದೆ ಸಂಗಮಗೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದುರ್ಗಾದೇವಿ ಕೆರೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯವಾಗಿ ವಿಸರ್ಜನೆ ಮಾಡಲಾಯಿತು.
ಇದಕ್ಕೂ ಪೂರ್ವ ಅಮವಾಸ್ಯೆಯ 3 ದಿನಕ್ಕೆ ಅಲೆ ದೇವರು ಮತ್ತು ಪಂಜಾ ದೇವರುಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. 9 ದಿನ ಕತ್ತಲ್ ರಾತ್ರಿ ಆಚರಣೆಯಲ್ಲಿ ಸರ್ಕಾರಿ ಹಿರೇಮಸೂತಿ ಅಗ್ನಿ ಹಾಯುವುದು ಮತ್ತು 7 ದಿನದ ಸವಾರಿಯಲ್ಲಿ ಲಾಲಶಾವಲಿ ಮಸೂತಿಯ ಆವರಣದಲ್ಲಿ ಅಗ್ನಿ ಹಾಯುವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು. 8 ದಿನದ ಸವಾರಿಯಲ್ಲಿ ಗಂಧ ಲೇಪನ ಮಾಡಲಾಯಿತು. ಮಸೂತಿಯಲ್ಲಿ ಪ್ರತಿಷ್ಠಾಪನೆಗೊಂಡ ದೇವರುಗಳಿಗೆ ಹಿಂದೂ ಮುಸಲ್ಮಾನ ಬಾಂಧವರು ನೈವೇದ್ಯ (ಸಕ್ಕರೆ) ಅರ್ಪಿಸಿದರು.