ಮುಸ್ಲಿಮರಿಲ್ಲದ ಊರಲ್ಲೂ ಭಾವೈಕ್ಯತೆಯ ಮೊಹರಂ

| Published : Jul 02 2025, 11:52 PM IST

ಸಾರಾಂಶ

ಮುಸ್ಲಿಮರಿಲ್ಲದ ಗ್ರಾಮಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ, ಸವಾರಿ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಪಕ್ಕದ ಊರಿನ ಮುಸ್ಲಿಂ ಧರ್ಮಗುರು, ಮುಲ್ಲಾಗಳು (ಮುಲ್ಲಾಸಾಬ್)ರನ್ನು ಕರೆಸಿ, ಅಲಾಯಿ ದೇವರ ಚಾಕ್ರಿ ಮತ್ತು ಓದಿಕೆ ಮಾಡಲು ನೇಮಿಸಲಾಗುತ್ತದೆ.

ಪಾಲಾಕ್ಷ ಬಿ. ತಿಪ್ಪಳ್ಳಿ

ಯಲಬುರ್ಗಾ:

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ತಾಲೂಕಿನ ಕೆಲ ಹಳ್ಳಿಗಳಲ್ಲಿ ಮುಸ್ಲಿಂ ಸಮುದಾಯದ ಒಂದು ಕುಟುಂಬ ಇಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಐತಿಹಾಸಿಕ ಹಿನ್ನೆಲೆ ಒಳಗೊಂಡಿದೆ.

ಮುಸ್ಲಿಮರಿಲ್ಲದ ಗ್ರಾಮಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ, ಸವಾರಿ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಪಕ್ಕದ ಊರಿನ ಮುಸ್ಲಿಂ ಧರ್ಮಗುರು, ಮುಲ್ಲಾಗಳು (ಮುಲ್ಲಾಸಾಬ್)ರನ್ನು ಕರೆಸಿ, ಅಲಾಯಿ ದೇವರ ಚಾಕ್ರಿ ಮತ್ತು ಓದಿಕೆ ಮಾಡಲು ನೇಮಿಸಲಾಗುತ್ತದೆ. ಅವರ ಸಹಕಾರದಿಂದ ಹಿಂದುಗಳು ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಿದ್ದು, ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಮನೆ-ಮನಗಳಲ್ಲೂ ಸಂಭ್ರಮ:

ಮೊಹರಂ ಹಬ್ಬದ ಅಂಗವಾಗಿ ಯುವಕರು, ಚಿಣ್ಣರು, ಅಂದ-ಚಂದದ ರಿಬ್ಬನ್‌ನಿಂದ ಸಿಂಗರಿಸಿದ ಕೊಡೆ ಹಿಡಿದು ಹೆಜ್ಜೆ ಕುಣಿತ, ನೃತ್ಯ, ಕೋಲಾಟ ಆಡುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಪವಾಡಗಳು ಮೈ ರೋಮಾಂಚನಗೊಳಿಸುತ್ತವೆ. ಹೊಟ್ಟೆ ಪಾಡಿಗೆ ಬೇರೆಡೆ ದುಡಿಯಲು ಹೋದ ನಿವಾಸಿಗಳು, ಬುಡಕಟ್ಟು ಜನಾಂಗದವರು ಈ ಹಬ್ಬಕ್ಕೆ ಆಗಮಿಸುವುದು ವಿಶೇಷ. ಮೊಹರಂ ಗಂಧ, ಕತಲ್ ರಾತ್ರಿ, ಅಲಾಯಿ ದೇವರ ದಫನ್ ದಿನದವರೆಗೆ ಹಬ್ಬದ ಸಂಭ್ರಮ ಮನ-ಮನೆಗಳಲ್ಲಿ ಕಳೆಗಟ್ಟಿರುತ್ತದೆ.

ಮಳೆ-ಬೆಳೆ ಕುರಿತು ಕಾರ್ಣಿಕ:

ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಸರ್ವ ಜನಾಂಗದವರು ಮೊಹರಂ ಹಬ್ಬದ ದಿನಗಳಲ್ಲಿ ಉಪವಾಸ ವ್ರತ ಮಾಡುವುದು, ಹೊಸಬಟ್ಟೆ ಖರೀದಿಸುವುದು, ದೀಡ್ ನಮಸ್ಕಾರ, ಬೇಡಿಕೊಂಡ ಹರಕೆ ತೀರಿಸುವುದು, ಅಲಾಯಿ ದೇವರಿಗೆ ಬೆಳ್ಳಿ ಛತ್ರಿ, ಬೆಳ್ಳಿ ಕುದುರೆ ಅರ್ಪಣೆ ಸೇರಿ ಸಕ್ಕರೆ, ಉಪ್ಪು, ಕೊಬ್ಬರಿ, ಕೆಂಪು ಸಕ್ಕರೆ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಲಾಯಿ ಕುಂಡದಲ್ಲಿ ಅಗ್ನಿ ಪ್ರವೇಶ, ತುಂಬಿದ ಕೊಡ ಮೇಲಕ್ಕೆತ್ತಿ ಮೈಮೇಲೆ ಸುರಿದುಕೊಳ್ಳುವ ಮೂಲಕ ಮಳೆ ಬೆಳೆ ಕುರಿತು ಕಾರ್ಣಿಕ ನುಡಿಯುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಆಚರಣೆ ಎಲ್ಲೆಲ್ಲಿ?

ಮುಸ್ಲಿಂ ಕುಟುಂಬಗಳಿಲ್ಲ ಊರುಗಳಾದ ತಾಲೂಕಿನ ತರಲಕಟ್ಟಿ, ಉಚ್ಚಲಕುಂಟಾ, ಹೊಸೂರು, ಬೋದೂರು, ಚಿಕ್ಕಮನ್ನಾಪುರ, ವನಜಭಾವಿ, ಗುಳೆ, ಗುಂಟಮಡು, ಶಿಡ್ಲಭಾವಿ, ಕೃಷ್ಣಾಪುರ, ಸಾಲಭಾವಿ, ಹುಲೆಗುಡ್ಡ, ನಿಲೋಗಲ್ ಗ್ರಾಮಗಳಲ್ಲಿ ಮುಸ್ಲಿಮರಿಲ್ಲದಿದ್ದರೂ ಮೊಹರಂ ಸಡಗರ, ಸಂಭ್ರಮದಿಂದ ನಡೆಯುತ್ತದೆ.ತಾಲೂಕಿನ ಗಡಿಗ್ರಾಮ ಬೋದೂರು ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಭಕ್ತಿ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಪಕ್ಕದ ಊರಿನ ಮುಲ್ಲಾಸಾಬ್ ಅವರ ಸಹಕಾರದಿಂದ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಹಿರಿಯರ ಕಾಲದಿಂದಲೂ ಸರ್ವ ಜನಾಂಗದವರು ಸೇರಿ ಮೊಹರಂ ಆಚರಿಸುತ್ತೇವೆ.

ಎನ್. ಬಸವರಾಜ, ಬೋದೂರು ಗ್ರಾಮಸ್ಥಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಎರಡು ಮಸೀದಿಗಳಿವೆ. ಮೊಹರಂ ಅಂಗವಾಗಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಲು ಬೇರೆ ಊರಿನ ಮುಲ್ಲಾಗಳನ್ನು ಕರೆಸಿ ವಿಶಿಷ್ಟ ರೀತಿ ಹಬ್ಬ ಆಚರಿಸಲಾಗುತ್ತದೆ. ದವಸ-ಧಾನ್ಯಗಳ ಮೂಲಕ ಮಳೆ-ಬೆಳೆ ಬಗ್ಗೆ ಕಾರ್ಣಿಕ ತಿಳಿಯುತ್ತದೆ. ಭಕ್ತರು ಶದ್ಧೆಯಿಂದ ಬೇಡಿಕೊಂಡ ಹರಕೆ ತೀರಿಸುತ್ತಾರೆ.

ಪ್ರಭುಗೌಡ ಪೊಲೀಸ್‌ಪಾಟೀಲ್, ತರಲಕಟ್ಟಿ ಗ್ರಾಮ