ಸಾರಾಂಶ
ಕನ್ನಡಪ್ರಭ ವಾರ್ತೆ ನಂದಿಗಿರಿಧಾಮ(ಚಿಕ್ಕಬಳ್ಳಾಪುರ)
2025ನೇ ಸಾಲಿನ 14ನೇ ಸಚಿವ ಸಂಪುಟಸಭೆಯಲ್ಲಿ ಅಭಿವೃದ್ಧಿಗೆ 3400 ಕೋಟಿ ರು. ಮೊತ್ತವನ್ನು ಮಂಜೂರು ಮಾಡಿದ್ದೇವೆ. ಅದರಲ್ಲಿ 2050 ಕೋಟಿ ರು. ಬೆಂಗಳೂರು ಜಿಲ್ಲಾ ಭಾಗಕ್ಕೇ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ತಾಲೂಕಿನ ನಂದಿಗಿರಿಧಾಮದಲ್ಲಿ ನಡೆದ 14ನೇ ಸಚಿವ ಸಂಪುಟದ ಸಭೆಯ ಬಳಿಕ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ರು. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17,147 ಕೋಟಿ ರು. ಖರ್ಚಾಗಿದೆ. ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆಯಾಗಿದೆ ಎಂದರು.
24.1 ಟಿಎಂಸಿ ನೀರಿನಲ್ಲಿ ಕುಡಿಯುವ ನೀರಿಗೆ 14 ಟಿಎಂಸಿ ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ ಮಾಡಿದ್ದು, ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆಗಳಾದ ಕೋಲಾರ .ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಹಾಸನಗಳ ತಾಲೂಕುಗಳಿಗೆ ನೀರು ಕೊಡುತ್ತೇವೆ ಎಂದು ಹೇಳಿದರು. 9807 ಕೋಟಿ ರು. ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಾಲ್ ನ ಕೆಲಸ ಶೇ 85 ರಷ್ಟು ಮುಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ರು. ಬೇಕಾಗಿದೆ. ಬಾಕಿ ಉಳಿದಿರುವುದು 6000 ಕೋಟಿ ರು.. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡಲು ಈ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಣಯಿಸುವುದಾಗಿ ತೀರ್ಮಾನಿಸಲಾಗಿದೆ ಎಂದರು.ಶಿಕ್ಷಣ, ಆರೋಗ್ಯ, ನೀರಾವರಿ, ಕುಡಿಯುವ ನೀರಿಗೆ ಆದ್ಯತೆ:
ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ 1125.25 ಕೋಟಿ ರು. ಮಂಜೂರು ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನೇ ಪ್ರಮುಖವಾಗಿ ಈ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.ಬೆಂಗಳೂರು ಗ್ರಾಮಾಂತರ ಇನ್ನು ಬೆಂಗಳೂರು ಉತ್ತರ ಜಿಲ್ಲೆ:
ಹಿಂದುಳಿದ ವರ್ಗದ ಅಭ್ಯರ್ಥಿಗಳು ಐಎಎಸ್, ಐಆರ್ ಎಸ್, ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 10 ಕೋಟಿ ವೆಚ್ಚದ ಎರಡು ವಸತಿ ಶಾಲೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು. ಬೆಂಗಳೂರು ಕೇಂದ್ರ ವಿವಿಗೆ ‘ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ’ ಎಂದು ಹೆಸರಿಡಲು ತೀರ್ಮಾನ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಹೊಸ ತಾಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ ಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ‘ಭಾಗ್ಯನಗರ’ ಎಂದು ಹೆಸರು ಬದಲಿಸುವುದಾಗಿ ತಿಳಿಸಿದರು.ಪ್ರಾದೇಶಿಕ ಸಮಸ್ಯೆಗಳ ಆದ್ಯತೆಯೊಂದಿಗೆ ಸಂಪುಟ ಸಭೆ:
ನಂದಿ ಬೆಟ್ಟದಲ್ಲಿ ನಡೆದ ಈ ಸಭೆಯು ಈ ವರ್ಷದ 14ನೇ ಸಭೆಯಾಗಿದೆ. ನಾವು ಆಡಳಿತವನ್ನು ಬೆಂಗಳೂರು ಕೇಂದ್ರಿತ ಎಂಬುದನ್ನು ತಪ್ಪಿಸಿ ವಿಕೇಂದ್ರೀಕರಣ ಮಾಡುವುದಕ್ಕಾಗಿಯೆ ಆಯಾ ಭಾಗದ ಸಮಸ್ಯೆಗಳ ಮೇಲೆ ಗಮನ ಹರಿಸಿ, ಅವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುತ್ತಿದ್ದೇವೆ. ಮೊದಲಿಗೆ ಕಲ್ಬುರ್ಗಿಯಲ್ಲಿ, ಆ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿದ್ದೆವು. ಮೂರನೇಯದಾಗಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದ್ದೇವೆಂದರು.ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ:
ಶಿಕ್ಷಣಕ್ಕೆ 1627.25 ಕೋಟಿ ರು. ನೀಡಿದ್ದೇವೆ. ಇದರಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಮೂಲಭೂತ ಸೌಕರ್ಯ ಒದಗಿಸುತ್ತಿದ್ದೇವೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ಎರಡು ವಸತಿ ನಿಲಯ ನಿರ್ಮಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.ನೀರಾವರಿ ಯೋಜನೆಗಳಿಗೆ - 1154 ಕೋಟಿ ರು. ನೀಡಿದ್ದೇವೆ. ಇದರಲ್ಲಿ 237 ಕೋಟಿ ರು.ಗಳನ್ನು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಣ ಹಾಗೂ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕಿನ 164 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದೇವೆ.
ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು 10 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ಮಾಡಲಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿ ವತಿಯಿಂದ 141.5 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ಆರೋಗ್ಯ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 46 ಕೋಟಿ ರು. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಹಾಗೂ 21.40 ಕೋಟಿ ರು. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯಲ್ಲಿನ ಮೆಡಿಕಲ್ ಕಾಲೇಜುಗಳಿಗೆ ಎಂಆರ್ ಐ ಯಂತ್ರಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಹಾಗೂ 56 ಕೋಟಿ ರು. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಪಿಎಚ್ ಸಿ ಹಾಗೂ ಮಂಚೇನಹಳ್ಳಿಯ ಆಸ್ಪತ್ರೆಗಳನ್ನು ಉನ್ನತೀಕರಿಸಲು ಹಾಗೂ ಹೆಚ್ಚುವರಿ ಕಾಮಗಾರಿ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ಒಟ್ಟಾರೆ 123 ಕೋಟಿ ರು. ವೆಚ್ಚದಲ್ಲಿ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಸಚಿವ ಎಚ್.ಕೆ.ಪಾಟೀಲ್ ರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.ಡಿಸಿಎಂ.ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂಸಿ.ಸುಧಾಕರ್, ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಭೋಸರಾಜ್, ಸತೀಶ್ ಜಾರಕಿಹೋಳಿ ಸೇರಿದಂತೆ ಎಲ್ಲ ಸಚಿವರು. ಶಾಸಕರಾದ ಪ್ರದೀಪ್ ಈಶ್ವರ್, ಎಸ್.ಎನ್.ಸುಬ್ಬಾರೆಡ್ಡಿ ಮತ್ತಿತರರು ಇದ್ದರು.
ಸಿಕೆಬಿ-10 ಸುದ್ದಿಗೋಷ್ಟಿಯಲ್ಲಿ ಸಿ.ಎಂ ಸಿದ್ದರಾಮಯ್ಯ ಮಾತನಾಡಿದರು