ಸಾರಾಂಶ
ಶಿರಸಿ: ನಾಟಕದಿಂದಲೇ ಮುಖ್ಯಮಂತ್ರಿ ಎಂದು ಹೆಸರು ಪಡೆದು, ರಾಜ್ಯ, ಹೊರ ರಾಜ್ಯ, ಹೊರ ದೇಶದಲ್ಲೂ ಚಂದ್ರು ಅವರಿಗೆ ಮುಖ್ಯಮಂತ್ರಿ ಚಂದ್ರು ಎಂದೇ ಖ್ಯಾತಿ ಕೊಟ್ಟ ನಾಟಕ ಮುಖ್ಯಮಂತ್ರಿ ನಗರದ ರಂಗಧಾಮದಲ್ಲಿ ಪ್ರದರ್ಶನಗೊಂಡು, ಕಲಾಸಕ್ತರ ಗಮನ ಸೆಳೆಯಿತು.ಬೆಂಗಳೂರಿನ ಕಲಾ ಗಂಗೋತ್ರಿ ರಂಗ ತಂಡದ ಕಲಾವಿದರರು ನಡೆಸಿಕೊಟ್ಟ ಎರಡು ತಾಸಿನ ಮುಖ್ಯಮಂತ್ರಿ ನಾಟಕ ರಾಜಕೀಯ ವಿದ್ಯಮಾನ, ಒಳಪಟ್ಟು, ತಂತ್ರಗಾರಿಕೆ, ರಾಜಕೀಯ ಚದುರಂಗ ಆಟ, ಮಂತ್ರಿ, ಮುಖ್ಯಮಂತ್ರಿಗಳ ಕುಟುಂಬಗಳು ಹೀಗೆ ಅನೇಕ ಸಂಗತಿಗಳು ಗಮನ ಸೆಳೆದವು.
೧೯೮೦ರಿಂದ ಈ ನಾಟಕ ಪ್ರದರ್ಶನ ನಡೆದಿದ್ದು, ಶಿರಸಿಯಲ್ಲಿ ೮೨೪ನೇ ಪ್ರದರ್ಶನವಾಗಿ ಗಮನ ಸೆಳೆಯಿತು. ಮುಖ್ಯಮಂತ್ರಿ ನಾಟಕದಲ್ಲಿ ಡಾ. ಚಂದ್ರು, ಡಾ. ಬಿ.ವಿ. ರಾಜಾರಾಮ, ಕಲಾ ಗಂಗೋತ್ರಿ ಮಂಜು, ಎಂ.ಎಸ್. ವಿದ್ಯಾ ಅವರು ಸೇರಿ ಮೂವತ್ತಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು. ಕಿರು, ಹಿರಿ ತೆರೆ ಕಲಾವಿದರಾದ ಶಿರಸಿಯ ಮಂಜುನಾಥ ಹೆಗಡೆ ಆಡಳ್ಳಿ, ಸಿದ್ಧಾರ್ಥ ಭಟ್ಟ ಪಾತ್ರ ಮಾಡಿ ಮೆಚ್ಚುಗೆ ಪಡೆದರು.೪೪ ವರ್ಷದ ಹಿಂದೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ರಚಿಸಿದ್ದ ಹಿಂದಿ ನಾಟಕವನ್ನು ಟಿ.ಎಸ್. ಲೋಹಿತಾಶ್ವ ಅನುವಾದ ಮಾಡಿದ್ದರು. ಈ ನಾಟಕವನ್ನು ಡಾ. ಬಿ.ವಿ. ರಾಜಾರಾಮ ಅವರು ಅವರು ಅರ್ಥಪೂರ್ಣವಾಗಿ ನಿರ್ದೇಶಿಸಿದ್ದಾರೆ. ಏತನ್ಮಧ್ಯೆ ನಾಟಕದ ರಂಗಸಜ್ಜಿಕೆ ಕೂಡ ವಿಭಿನ್ನವಾಗಿತ್ತು.ನಾಟಕಕ್ಕೆ ಚಿಂತನ ರಂಗ ಅಧ್ಯಯನ ಕೇಂದ್ರ, ಸ್ಕಾಡವೇಸ್, ನೆಮ್ಮದಿ ಬಳಗ, ರಂಗಧಾಮ, ಸಾಮ್ರಾಟ್ ಹೋಟೆಲ್, ನಯನ ಫೌಂಡೇಶನ್ ಸಹಕಾರ ನೀಡಿದ್ದವು.
ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಕಾಶಿನಾಥ ಮೂಡಿ ವೀಕ್ಷಣೆಯನ್ನು ಮಾಡಿದರು.ಇದೇ ವೇಳೆ ೯೪ರ ಹಿರಿಯ, ಸ್ವಾತಂತ್ರ್ಯ ಹೋರಾಟಗಾರರಾದ ಕಾಶಿನಾಥ ಮೂಡಿ ಅವರು ನೇತ್ರದಾನಕ್ಕೆ ಸಹಿ ಮಾಡಿದ್ದನ್ನು ಡಾ. ಶಿವರಾಮ ಕೆ.ವಿ. ಪ್ರಕಟಿಸಿದರು. ಕಲಾ ಗಂಗೋತ್ರಿಯ ಪರವಾಗಿ ಕಾಶಿನಾಥ ಮೂಡಿ ಅವರನ್ನು ಬಿ.ವಿ. ರಾಜಾರಾಮ ಗೌರವಿಸಿದರು. ಚಂದ್ರು ಉಡುಪಿ, ಸಾಮ್ರಾಟ್ ಸತೀಶ ಹೆಗಡೆ ವಿವಿಧ ಜವಾಬ್ದಾರಿ ನಿರ್ವಹಿಸಿದರು. ವೈಶಾಲಿ ವಿ.ಪಿ. ಹೆಗಡೆ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.