ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಜನರ ಬಹುಕಾಲದ ಬೇಡಿಕೆಯಾಗಿರುವ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಆ ಮೂಲಕ ಕ್ರೀಡಾಸಕ್ತರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ಹೈಕೋರ್ಟ್ ಹಿರಿಯ ವಕೀಲ ಮುಕ್ಕಾಟಿರ ತಿಮ್ಮಯ್ಯ ನಾಣಯ್ಯ ತಿಳಿಸಿದ್ದಾರೆ.ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಣ್ಣ ಜಿಲ್ಲೆಯಾಗಿರುವ ಕೊಡಗನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಇಡೀ ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದಾರೆ. ಇದೀಗ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಯುವ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಸೈನಿಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಯದ್ದಾಗಿದೆ ಎಂದರು.
ಕ್ರೀಡೆ ಕೊಡಗಿನ ಶಕ್ತಿಯಾಗಿದ್ದು, ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತೋರಬೇಕು ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದೆ. ಹಾಕಿಹಬ್ಬ ಹೊಸ ದಾಖಲೆ ಬರೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ಹಿರಿಯ ಸಲಹೆಗಾರ ಕಿಶನ್ ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು. ಕರ್ನಾಟಕ ತಂಡದಲ್ಲೂ ಕೊಡಗಿನ ಪ್ರತಿಭೆಗಳು ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್, ಪ್ರಮುಖರಾದ ಕೊಕ್ಕಲೆರ ಅಪ್ಪಯ್ಯ, ಪಂದ್ಯಾವಳಿಯ ನಿರ್ದೇಶಕರು ಹಾಗೂ ಫ್ರಾಂಚೈಸಿಗಳ ನಾಯಕರು ಇದ್ದರು.
ಪೊರ್ಕೊಂಡ ಡಿಂಪಲ್ ದೇಚಮ್ಮ ಪ್ರಾರ್ಥಿಸಿದರು. ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ನಿರ್ದೇಶಕ ಕುಲ್ಲೇಟಿರ ಶಾಂತ ಕಾಳಪ್ಪ ಸ್ವಾಗತಿಸಿದರು.ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ವಂದಿಸಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಕೂರ್ಗ್ ಬ್ಲಾಸ್ಟರ್ಸ್ ಮತ್ತು ಕೂರ್ಗ್ ಕೊಡವ ಟ್ರೆಂಬ್ಸ್ ನಡುವೆ ಮೊದಲ ಪಂದ್ಯಾವಳಿ ನಡೆಯಿತು.
ಮೇ 15ರ ವರೆಗೆ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರು.1.50 ಲಕ್ಷ, ದ್ವಿತೀಯ 75 ಸಾವಿರ, ತೃತೀಯ 25 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.