ಸಾರಾಂಶ
ಮೂಡಬಿದಿರೆ ವಲಯದ ಅರಣ್ಯ ಅಧಿಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ಬೋನ್ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ.
ಕನ್ನಡಪ್ರಭವಾರ್ತೆ ಮೂಲ್ಕಿ
ಕಳೆದ ಕೆಲವು ಸಮಯಗಳಿಂದ ಮೂಲ್ಕಿ ಪರಿಸರದಲ್ಲಿ ಎರಡು ಮರಿಗಳೊಂದಿಗೆ ಚಿರತೆ ತಿರುಗಾಡುತ್ತಿದ್ದು ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಶನಿವಾರ ರಾತ್ರಿ ಮೂಲ್ಕಿಯ ಅಕ್ಕಸಾಲಿಕರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಚಿರತೆ ನುಗ್ಗಿದ್ದು ಮನೆಯವರು ಕಂಗಲಾಗಿದ್ದು ಮೂಡಬಿದಿರೆ ವಲಯದ ಅರಣ್ಯ ಅಧಿಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ಬೋನ್ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ.ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಎದುರು ಭಾಗದ ಅಡುಗೆ ಕೋಣೆಗೆ ಶನಿವಾರ ರಾತ್ರಿ 9.30 ಸುಮಾರಿಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ಅವರ ನಾಯಿ ಬೊಗಳಲು ಶುರು ಮಾಡಿದ್ದು ಸದಾನಂದ ಕೋಟ್ಯಾನ್ ಚಿರತೆ ಪ್ರತ್ಯಕ್ಷ ನೋಡಿ ಕಂಗಾಲಾಗಿದ್ದು ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಬಂದಿದ್ದು ಮನೆಯ ಅಡುಗೆಮನೆಯ ಎದುರು ಬಾಗಿಲಿಗೆ ಮುಂದಾಗಿ ಬೋನ್ ಅಳವಡಿಸಿದ್ದರೂ ಸುಮಾರು ಹೊತ್ತು ಕಳೆದರೂ ಚಿರತೆಯ ಪತ್ತೆ ಇರಲಿಲ್ಲ. ತಡರಾತ್ರಿ ಸುಮಾರು 2.30ರ ವೇಳೆಗೆ ಚಿರತೆ ಬೋನ್ ಒಳಗೆ ಬಿದ್ದು ಸೆರೆಯಾಗಿದ್ದು ಸ್ಥಳೀಯರು ನಿಟ್ಟುಸಿರುಪಡುವಂತಾಯಿತು. ಮೂಲ್ಕಿ ಆಸುಪಾಸಿನಲ್ಲಿ ಇನ್ನಷ್ಟು ಚಿರತೆಗಳು ಇರುವ ಸಾಧ್ಯತೆಯಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.