ಮೂಲ್ಕಿ: ಮೂಲ್ಕಿಯ ಗೇರುಕಟ್ಟೆಯಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡು ಮಾರ್ಚ್‌ ತಿಂಗಳಿನಲ್ಲಿ ಉದ್ಘಾಟನೆಗೊಂಡ ಮೂಲ್ಕಿ ತಾಲೂಕು ಆಡಳಿತ ಪ್ರಜಾ ಸೌಧ ಅವ್ಯವಸ್ಥೆಗಳ ಆಗರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿರಂಜನ್ ಹರಿಪಾದೆ ಆರೋಪಿಸಿದ್ದಾರೆ.

ಮೂಲ್ಕಿ ತಾಲೂಕು ಆಡಳಿತ ಕೇಂದ್ರ, ನೂತನ ಪ್ರಜಾಸೌಧ ಕಾಟಾಚಾರದ ಕಟ್ಟಡವಾಗಿದ್ದು ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ. ಕಟ್ಟಡ ಒಳಗಿನ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ನೂತನ ಆಡಳಿತ ಸೌಧ ಆರಂಭಗೊಂಡಂದಿನಿಂದ ಸರ್ವರ್ ಸಮಸ್ಯೆ ಕಾಣುತ್ತಿದ್ದು ತಾಲೂಕು ಆಡಳಿತ ಸೌಧಕ್ಕೆ ಕೆಲಸಕ್ಕೆಂದು ಬರುವ ಗ್ರಾಮಸ್ಥರು ತಮ್ಮ ಕೆಲಸವಾಗದೆ ಸುಸ್ತಾಗಿ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಒಂದು ಕಡೆ ಸರ್ವರ್ ಸಮಸ್ಯೆಯಾದರೆ ಇನ್ನೊಂದು ಕಡೆ ಯಾವುದೇ ಅರ್ಜಿ ಸ್ವೀಕೃತಿ ಸಾಧ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೂಕ ಪ್ರೇಕ್ಷಕರಂತೆ ತಾಲೂಕು ಕಚೇರಿಗೆ ಬಂದ ಸಾರ್ವಜನಿಕರನ್ನು ವಾಪಸ್ ಕಳಿಸುವ ಪರಿಸ್ಥಿತಿ ಎದುರಾಗಿದೆ.ವಿದ್ಯುತ್ ಇಲ್ಲದಿದ್ದರೆ ಕೆಲಸ ಇಲ್ಲ!: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಪ್ರತೀ ಗುರುವಾರ ವಿದ್ಯುತ್ ಅಡಚಣೆಯಿದ್ದು ಬೆಳಗ್ಗಿನಿಂದ ಸಂಜೆವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ, ಈ ಸಂದರ್ಭ ತಾಲೂಕು ಆಡಳಿತ ಸೌಧದಲ್ಲಿ ಯಾವುದೇ ಅರ್ಜಿ, ಆರ್‌ಟಿಸಿ ಇನ್ನಿತರ ದಾಖಲೆ ಪತ್ರ ತೆಗೆದುಕೊಳ್ಳುಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ಕಟ್ಟಡದಲ್ಲಿ ಇನ್ವರ್ಟರ್ ಇದ್ದರೂ ನಿರ್ವಹಣೆ ಮಾಡಿದ ಇಂಜಿನಿಯರ್ ಎಡವಟ್ಟಿನಿಂದ ಇಡೀ ಕಟ್ಟಡ ಕತ್ತಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಸ್ಥಿತಿ ಉಂಟಾಗಿದೆ.ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್‌ ಅವರಿಗೆ ದೂರು ನೀಡಿದ್ದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ಆಗುತ್ತಿರುವ ತೊಂದರೆಗೆ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದಾರೆ. ಶಾಸಕರ ದಿಢೀರ್ ಭೇಟಿನೂತನ ಆಡಳಿತ ಸೌದದಲ್ಲಿ ಅವ್ಯವಸ್ಥೆಗಳ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಪ್ರಜಾ ಸೌಧಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಅವ್ಯವಸ್ಥೆಗಳು ಗಮನಕ್ಕೆ ಬಂದಿದ್ದು ಕೂಡಲೇ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ.