ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಅಧಿಕಾರಕ್ಕೆ ಬಂದರೂ ಕರಾವಳಿಯಲ್ಲಿ ಧರ್ಮ ದಂಗಲ್ ಮುಂದುವರಿದಿದೆ. ಮುಜರಾಯಿ ಇಲಾಖೆ ಸುಪರ್ದಿಗೆ ಒಳಪಟ್ಟ ಮಂಗಳೂರು ಹೊರವಲಯದ ಕುಡುಪು ಶ್ರೀಅನಂತಪದ್ಮನಾಭ ದೇವಸ್ಥಾನದ ಷಷ್ಠಿ ಜಾತ್ರೆಯಲ್ಲಿ ಈ ಬಾರಿಯೂ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ.ಕುಡುಪಿನಲ್ಲಿ ಷಷ್ಠಿ ಜಾತ್ರೋತ್ಸವ ಡಿ.14ರಿಂದ 19ರ ವರೆಗೆ ನಡೆಯಲಿದ್ದು, ಜಾತ್ರೆಯ ವ್ಯಾಪಾರ ಮಳಿಗೆಯನ್ನು ಓರ್ವ ಹಿಂದು ವ್ಯಾಪಾಸ್ಥರಿಗೆ ಏಲಂ ನಡೆಸಲಾಗಿದೆ. ಅವರು ಮುಸ್ಲಿಮರಿಗೆ ವ್ಯಾಪಾರಕ್ಕೆ ಅಂಗಡಿ ಮಳಿಗೆ ನೀಡುವುದಕ್ಕೆ ನಿರಾಕರಿಸಿದ್ದು, ಇದುವೇ ಈಗ ವಿವಾದವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಇದೇ ರೀತಿ ವಿವಾದ ತಲೆದೋರಿದಾಗ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಾಕಿ ಏಲಂಗೆ ಅವಕಾಶ ನೀಡಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ಸಿಗುವಂತೆ ಮಾಡಿತ್ತು. ಇದರ ನಡುವೆಯೇ ಕುಡುಪಿನಲ್ಲಿ ಕೂಡ ಮರು ಏಲಂ ನಡೆಸುವ ಮೂಲಕ ಮುಸ್ಲಿಮರ ಸಹಿತ ಎಲ್ಲರಿಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಎಡಪಂಥೀಯ ಸಂಘಟನೆಗಳು ಜಿಲ್ಲಾಡಳಿತವನ್ನು ಆಗ್ರಹಿಸಿವೆ.
ಕರಾವಳಿಯಲ್ಲಿ ಹಿಂದೂ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅನುಮತಿ ನಿರಾಕರಣೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು, ಪ್ರತಿ ಬಾರಿಯೂ ವಿವಾದಕ್ಕೆ ಕಾರಣವಾಗುತ್ತಿದೆ. ಹಿಂದು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನಿರಾಕರಣೆಯನ್ನು ಹಿಂದು ಸಂಘಟನೆಗಳು ಸ್ವಾಗತಿಸಿವೆ. ಈ ನಡುವೆ ಹಿಂದುಯೇತರರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ಹಿಂದು ಸಂಘಟಕರ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂಬ ಸಮಜಾಯಿಸಿಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ನೀಡುತ್ತಿದ್ದಾರೆ.ಬೀದಿಬದಿ ವ್ಯಾಪಾರಸ್ಥರ ಆಕ್ರೋಶ:
ಕುಡುಪು ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ಎಸಗಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಸಂಘ ಆರೋಪಿಸಿದೆ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಬಡ ಸಂತೆ ವ್ಯಾಪಾರಿಗಳ ಜೊತೆ ನಿಲ್ಲಲಾಗದ ಸರ್ಕಾರಕ್ಕೆ ಧಿಕ್ಕಾರ ಎಂದು ಮುಸ್ಲಿಂ ವ್ಯಾಪಾರಿಗಳು ಕಿಡಿ ಕಾರಿದ್ದಾರೆ.ಕುಡುಪಿನಲ್ಲಿ ಗುರುವಾರ ದೇವಸ್ಥಾನದ ಆಡಳಿತ ಮಂಡಳಿ ಸಂತೆ ವ್ಯಾಪಾರದ ಹಂಚಿಕೆ ನಡೆಸಿದೆ. ಈ ವೇಳೆ ಸಂತೆ ವ್ಯಾಪಾರಕ್ಕೆ ಜಾಗ ಕೇಳಲು ಮುಸ್ಲಿಂ ವ್ಯಾಪಾರಿಗಳು ತೆರಳಿದ್ದಾರೆ. ಆದರೆ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿತ್ತು. ಬೇಕಾದರೆ ಹಿಂದುಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಆಡಳಿತ ಮಂಡಳಿ ಸೂಚಿಸಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಸಂತೆ ವ್ಯಾಪಾರ ನಡೆಯುತ್ತದೆ. ಕಳೆದ ಬಾರಿಯೂ ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಕುಡುಪು ದೇವಸ್ಥಾನದಲ್ಲಿ ವ್ಯಾಪಾರ ನಿರಾಕರಿಸಲಾಗಿತ್ತು. ಈ ಬಾರಿಯೂ ಇದು ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜಿನಾಮೆ ನೀಡಬೇಕು. ತಕ್ಷಣ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಕ್ಕೆ ಮುಸ್ಲಿಂ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.