ಸಾರಾಂಶ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇತ್ತೀಚೆಗೆ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ನಡೆದ ದಿ. ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ ಕವಿ, ಕಥೆಗಾರ, ನಟ, ನಿರೂಪಕನಾಗಿದ್ದ ಮನೋಹರ ಪ್ರಸಾದ್ ಅವರು ಕೇವಲ ಪತ್ರಕರ್ತರಲ್ಲದೆ ಜಿಲ್ಲೆಯಲ್ಲೇ ಓರ್ವ ಪ್ರಸಿದ್ಧ ಸೆಲೆಬ್ರಿಟಿಯಾಗಿ ಮಿಂಚಿದ್ದರು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ, ಪತ್ರಕರ್ತರಾದ ಪಿ.ಬಿ. ಹರೀಶ್ ರೈ ಅಭಿಪ್ರಾಯ ಪಟ್ಟರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರದಂದು ಕುತ್ತಾರುವಿನ ಖಾಸಗಿ ಸಭಾಂಗಣದಲ್ಲಿ ನಡೆದ ದಿ. ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ.ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಖ್ಯಾತ ಹಿರಿಯ ಪತ್ರಕರ್ತರು, ಸಾಹಿತಿಗಳಾದ ಮಲಾರ್ ಜಯರಾಮ ರೈ, ಮಾಧ್ಯಮ ಹಿರಿಯ ಛಾಯಾಗ್ರಾಹಕರಾದ ಜಯಂತ್ ಉಳ್ಳಾಲ್, ವೃತ್ತಿಪರ ಹಿರಿಯ ಛಾಯಾಗ್ರಾಹಕ ಜಾನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ,ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್. ಕೊಣಾಜೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯದ ಉಪಾಧ್ಯಕ್ಷ ರಾಜೇಶ್ ಮುಖ್ಯ ಅತಿಥಿಗಳಾಗಿದ್ದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಆಲಿಯಬ್ಬ ಮತ್ತು ದೇವಕಿ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ಮಲ್ಲಿಕಾ ಭಂಡಾರಿ ವಂದಿಸಿದರು. ಅನುಪಮ, ಕೆ.ಎಂ.ಕೆ. ಮಂಜನಾಡಿ ಮತ್ತು ಶಶಿಕಾಂತಿ ಉಳ್ಳಾಲ್ ಅವರು ಸನ್ಮಾನಿತರನ್ನು ಪರಿಚಯಿಸಿದರು.