ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಹುಮುಖಿ ವ್ಯಕ್ತಿತ್ವದ ಶಿಕ್ಷಕರು ಸಾಂಸ್ಕೃತಿಕ ರಾಯಭಾರಿಗಳು. ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕಲಿಕೆ ಮತ್ತು ಬೋಧನೆಯಲ್ಲಿ ತೊಡಗಿದರೆ ಶಿಕ್ಷಣದಲ್ಲಿ ಗುಣಾತ್ಮಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಹುರುಳಿ.ಎಮ್.ಬಸವರಾಜ್ ತಿಳಿಸಿದರು.ನಗರದ ಪಿಳ್ಳೇಕೆರೆನಹಳ್ಳಿ ಗ್ರಾಮದ ಬಾಪೂಜಿ ಸಮೂಹ ಸಂಸ್ಥೆಗಳ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ-26 ಪ್ರಯುಕ್ತ ಶಿಕ್ಷಣದಲ್ಲಿ ರಂಗಕಲೆ ರಂಗಭೂಮಿ ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ, ರಂಗಸಂದೇಶ ಹಾಗೂ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ರಂಗಭೂಮಿಯ ಸಾಧ್ಯತೆಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಶಿಕ್ಷಣದ ಪಠ್ಯಗಳು ರಂಗಭೂಮಿಯ ತಂತ್ರಗಾರಿಕೆಯಲ್ಲಿ ಪಠ್ಯೇತರ ವಸ್ತುಗಳಾಗಿ ಮಾರ್ಪಾಡಾಗಬೇಕು. ಆಧುನಿಕ ಸಾಧನಗಳಮೂಲಕ ಬದಲಾಗುತ್ತಿರುವ ಮಾನವ ಸಂಬಂಧಗಳ ಅಪಾಯದ ಅರಿವು ಶಿಕ್ಷಕರಲ್ಲಿಬೇಕು. ಶಿಕ್ಷಣವು ಸಾಂಸ್ಕೃತಿಕ ಮನೋಭಾವದ ಅನನ್ಯತೆಯ ಪ್ರತೀಕವಾಗಿದೆ. ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆ ನೀಡುತ್ತವೆ ಎಂದರು.
ಶಿಕ್ಷಕರು ತಮ್ಮ ಕಲಿಕೆಯನ್ನು ನಿರಂತರಗೊಳಿಸಬೇಕು. ಸೃಜನಶೀಲ ಚಿಂತನೆ, ಸಂವಹನಾ ಕೌಶಲ, ಸಾಂಸ್ಕೃತಿಕ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ. ಪ್ರಶಿಕ್ಷಣಾರ್ಥಿಗಳು ವಿಭಿನ್ನ ರೀತಿಯ ಆಲೋಚನೆಗಳನ್ನು ಪಠ್ಯಾಧಾರಿತ ವಿಷಯಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಮ್.ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನವೊಂದು ನಾಟಕ ರಂಗ, ನಾವೆಲ್ಲರೂ ಪಾತ್ರಧಾರಿಗಳು. ರಂಗಭೂಮಿ ಕಲಾವಿದರು ಸಂಕಷ್ಟಗಳನ್ನು ನುಂಗಿ ಪ್ರೇಕ್ಷಕರಿಗೆ ವಾಸ್ತವದ ಜೀವನ ಮೌಲ್ಯಗಳನ್ನು ಪ್ರಾಯೋಗಿಕವಾಗಿ ಅಭಿನಯಿಸಿ ಅರಿವು ಮೂಡಿಸುತ್ತಾರೆ. ರಂಗ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಭದ್ರತೆ ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು. ಪಠ್ಯಾಧಾರಿತ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಶಾಲೆಗಳಲ್ಲಿ ನಾಟಕ ಶಿಕ್ಷಕರ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಈ ವಿಷಯವನ್ನು ಮನಗಂಡು ಕಾರ್ಯೋನ್ಮೂಖವಾಗಬೇಕು ಎಂದರು.
ಸಂಘದ ಅಧ್ಯಕ್ಷ ಡಾ.ಕೆ.ಮೋಹನ್ ಕುಮಾರ್ ಮಾತನಾಡಿ, ಶಿಕ್ಷಣ ಮತ್ತು ರಂಗಭೂಮಿ ಮನುಕುಲವನ್ನು ಹಸನುಗೊಳಿಸುತ್ತದೆ. ಪ್ರತಿಯೊಬ್ಬ ಶಿಕ್ಷಕರು ರಂಗಭೂಮಿಯ ತಂತ್ರಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂಆರ್.ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಡಾ.ಕೆ.ಮೋಹನ್ ಕುಮಾರ್ , ಹಿರಿಯ ರಂಗಭೂಮಿ ಕಲಾವಿದ ಕೆ.ಜಂಬುನಾಥ್, ಹಿರಿಯ ಸಾಹಿತಿ ಪರಮೇಶ್ವರಪ್ಪ ಕುದುರಿ, ಹಿರಿಯ ಕಲಾವಿದ ಚಂದ್ರಾರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪ ಪ್ರಾಚಾರ್ಯ ಎಚ್.ಎನ್.ಶಿವಕುಮಾರ್,
ಪ್ರಾಧ್ಯಾಪಕರಾದ ಡಾ.ಜಿ.ಹನುಮಂತರೆಡ್ಡಿ, ಟಿ.ವೈ.ಗೀತ, ತಂಜೀಮ, ಎಸ್.ಮಂಜುನಾಥಪ್ಪ, ಓ.ಎಮ್. ಮಂಜುನಾಥ, ದೈ.ಶಿ. ಡಾ.ಆರ್.ಗಿರೀಶ್, ನಿವೃತ್ತ ನೌಕರ ರಾಜಶೇಖರ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.