ಸಾರಾಂಶ
ಧಾರವಾಡ:
ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಫೆ. 14ರಿಂದ 19ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ರಂಗಾಂತರಗ ಹೆಸರಿನ ಬಹುಭಾಷಾ ನಾಟಕೋತ್ಸವ ನಡೆಯಲಿದೆ.ಈ ಕುರಿತು ಪ್ರಕಟಣೆ ನೀಡಿರುವ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಫೆ. 14ರಂದು ಸಂಜೆ 6ಕ್ಕೆ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ರಂಗಸಮಾಜ ಸದಸ್ಯರಾದ ಡಾ. ರಾಜಪ್ಪ ದಳವಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿರ್ದೇಶಕ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ನಾಟಕಗಳು:ಫೆ. 14ರಂದು ಗ್ವಾಲೆ ಮತವಾಲೆ (ಹಿಂದಿ ಭಾಷೆ) ನಾಟಕವನ್ನು ರಂಗಾಯಣ ತಾತ್ಕಾಲಿಕ ರೆಪರ್ಟರಿ, ಲಿವಿಂಗ್ ಲೈಟ್ಲಿ ಹಾಗೂ ಬಾಂಬೆ ಥಿಯೇಟರ್ ಗ್ರೂಪ್ ಪ್ರಸ್ತುತಪಡಿಸಲಿದ್ದಾರೆ. ಫೆ. 15ರಂದು ಸೋಪಾನ ಕೇರಳ ತಂಡ ಅಭಿನಯಿಸುವ “ಕಲಿವೇಷಂ” (ಮಲೆಯಾಳಂ ಭಾಷೆ) ನಾಟಕಕ್ಕೆ ರಂಗಸಮಾಜ ಸದಸ್ಯರಾದ ಶಶಿಧರ್ ಬಾರೀಘಾಟ್ ಚಾಲನೆ ನೀಡಲಿದ್ದಾರೆ. ಫೆ. 16ರಂದು ಮಹಾರಾಷ್ಟ್ರದ ಅಭಿರುಚಿ ಕೊಲ್ಲಾಪುರ ತಂಡ ಅಭಿನಯಿಸುವ “ಶ್ವೇತವರ್ಣಿ ಶಾಮಕರ್ಣಿ” (ಮರಾಠಿ ಭಾಷೆ) ನಾಟಕಕ್ಕೆ ರಂಗಸಮಾಜ ಸದಸ್ಯರಾದ ಜಹಾಂಗೀರ್ ಎಸ್. ಚಾಲನೆ ನೀಡಲಿದ್ದಾರೆ. ಫೆ. 17ರಂದು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ “ಸತ್ತವರ ನೆರಳು” (ಕನ್ನಡ ಭಾಷೆ) ನಾಟಕಕ್ಕೆ ರಂಗಸಮಾಜ ಸದಸ್ಯರಾದ ಎಚ್.ಎಸ್. ಸುರೇಶಬಾಬು ಚಾಲನೆ ನೀಡಲಿದ್ದಾರೆ. 18ರಂದು ಬೆಂಗಳೂರಿನ ರಂಗರಥ ಟ್ರಸ್ಟ್ ಅಭಿನಯಿಸುವ “ಇದ್ದಾಗ ನಮ್ದು ಕದ್ದಾಗ ನಮ್ದು”(ಕನ್ನಡ ಭಾಷೆ) ನಾಟಕಕ್ಕೆ ರಂಗಸಮಾಜ ಸದಸ್ಯರಾದ ಮಹಾಂತೇಶ್ ಗಜೇಂದ್ರಗಡ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಫೆ. 19ರಂದು ಸಂಜೆ 6ಕ್ಕೆ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಸಮಾರೋಪ ನುಡಿಗಳನ್ನಾಡುವರು. ರಂಗಸಮಾಜ ಸದಸ್ಯರಾದ ಡಿಂಗರಿ ನರೇಶ್, ವಿದ್ವಾಂಸ ಡಾ. ಗಣೇಶ ದೇವಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ “ಧರ್ಮನಟಿ”(ಕನ್ನಡ ಭಾಷೆ) ನಾಟಕವನ್ನು ಬೆಂಗಳೂರಿನ ರಂಗರಥ ಟ್ರಸ್ಟ್ ತಂಡದವರು ಪ್ರಸ್ತುತಪಡಿಸಲಿದ್ದಾರೆ. ಪ್ರತಿದಿನ ನಾಟಕ ಪೂರ್ವದಲ್ಲಿ ಧಾರವಾಡದ ಮಧುರವೇಣಿ ನೃತ್ಯಾಲಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಬೇಕು ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.