8 ವರ್ಷದ ಮಗುವಿಗೆ ಅಪೊಲೋದಲ್ಲಿ ಬಹು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ

| Published : Mar 02 2024, 01:49 AM IST

8 ವರ್ಷದ ಮಗುವಿಗೆ ಅಪೊಲೋದಲ್ಲಿ ಬಹು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆ ವೈದ್ಯರು ತಮಿಳುನಾಡಿನ ಎಂಟು ವರ್ಷದ ಬಾಲಕಿಗೆ ಅತ್ಯಂತ ಸಂಕೀರ್ಣವಾದ ಬಹು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಲ್ಲಿನ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆ ವೈದ್ಯರು ತಮಿಳುನಾಡಿನ ಎಂಟು ವರ್ಷದ ಬಾಲಕಿಗೆ ಅತ್ಯಂತ ಸಂಕೀರ್ಣವಾದ ಬಹು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹುಟ್ಟಿನಿಂದಲೇ ಹೆಪಾಟಿಕ್‌ ಫೈಬ್ರೋಸಿಸ್‌ ಮತ್ತು ಆಟೋಸೋಮಲ್‌ ರಿಸೆಸಿವ್‌ ಪಾಲಿಸಿಸ್ಟಿಕ್‌ ಎಂದು ಕರೆಯಲ್ಪಡುವ ಕಿಡ್ನಿ ಕಾಯಿಲೆಯು ಬಾಲಕಿಯಲ್ಲಿ ಪತ್ತೆಯಾಗಿತ್ತು. ಅನುವಂಶಿಕವಾದ ಈ ಕಾಯಿಲೆಯು ಬಾಲಕಿಗೆ 6 ವರ್ಷ ವಯಸ್ಸಿನಲ್ಲಿದ್ದಾಗ ಕಾಣಿಸಿಕೊಂಡಿತ್ತು. ಇದರಿಂದಾಗಿ ಬಾಲಕಿಯು ತೀವ್ರವಾದ ಪಿತ್ತಜನಕಾಂಗದ ಕಾಯಿಲೆಯ ತೊಡಕುಗಳು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿದ್ದತ್ತು.

ಚೆನ್ನೈನಲ್ಲಿದ್ದ ತಜ್ಞ ವೈದ್ಯರು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಶಿಫಾರಸು ಮಾಡಿದ್ದರು. ಬಾಲಕಿಗೆ ಅಂಗಾಂಗ ಕಸಿ ಮಾಡಲು ದಾನಿಗಳ ಅಗತ್ಯವಿತ್ತು. ಆಕೆಯ ಪೋಷಕರೇ ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದರೂ ಇಬ್ಬರೂ ಕ್ರಾಸ್‌ ಮ್ಯಾಚ್‌ ಪಾಸಿಟಿವಿಟಿ ಹೊಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಆ ನಂತರ 14 ವರ್ಷದ ದಾನಿಯೊಬ್ಬರು ಅಂಗ ದಾನ ಮಾಡಿದ್ದು, ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸಫಲರಾದೆವು ಎಂದು ಆಂಕೊಲಾಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌, ರೊಬೊಟಿಕ್ ಸರ್ಜನ್‌ ಮುಖ್ಯಸ್ಥ ಡಾ। ಟಿ.ಮನೋಹರ್‌ ತಿಳಿಸಿದ್ದಾರೆ.

ಬಹು ಅಂಗಾಂಗ ಕಸಿ ವಿಭಾಗದ ಹಿರಿಯ ವೈದ್ಯ ಸಂಜಯ್‌ ಅವರು, ಈ ಪ್ರಕರಣ ಬಹಳ ವಿಶಿಷ್ಟವಾಗಿದ್ದು, ವಿವಿಧ ತಜ್ಞರಿಂದ ಸಂಯೋಜಿತ ಪ್ರಯತ್ನದ ಫಲವಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು ಎಂದಿದ್ದಾರೆ.

ಶೇಷಾದ್ರಿಪುಂ ಅಪೋಲೋ ಆಸ್ಪತ್ರೆ ಉಪಾಧ್ಯಕ್ಷ ಉದಯ್‌ ದಾವ್ಹಾ ಅವರು, ಶಸ್ತ್ರಚಿಕಿತ್ಸಾ ಆರೈಕೆಯಲ್ಲಿ ಅತ್ಯುನ್ನತ ಗುಣಮಟ್ಟ ಉಳಿಸಿಕೊಳ್ಳಲು ಬದ್ಧರಾಗಿದ್ದು, ರೋಗಿಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಸದಾ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.