ಉತ್ತರಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಯ ರೈತರು, ವಿದ್ಯಾರ್ಥಿಗಳು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ
ಹಳಿಯಾಳ: ಬಾಂಬೆ ಕರ್ನಾಟಕ ಪ್ರದೇಶವು ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಅತ್ಯಂತ ಪ್ರಖರವಾಗಿ ಹೋರಾಡಿದ ನೆಲ. ಸಾವಿರಾರು ಹೋರಾಟಗಾರರ ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಆ ಇತಿಹಾಸವನ್ನು ಸಂಶೋಧನೆಯ ಮೂಲಕ ಹೊರತರುವ ಕೆಲಸ ಆಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ.ಖಾನ್ ಹೇಳಿದರು.
ತಾಲೂಕಿನ ಹವಗಿ ಗ್ರಾಮದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗೆಜೆಟಿಯರ್ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ, ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಭಾಗ, ಕಲಾ ವೇದಿಕೆ, ಸಂಶೋಧನಾ ಕೋಶ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ "ಬಾಂಬೆ ಕರ್ನಾಟಕದಲ್ಲಿ ವಸಾಹತುಶಾಹಿ ಮತ್ತು ಸ್ವಾತಂತ್ರ್ಯ ಚಳುವಳಿ " ವಿಷಯದ ಕುರಿತು ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಮತ್ತು ಐತಿಹಾಸಿಕ ದಾಖಲೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ಉತ್ತರಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಯ ರೈತರು, ವಿದ್ಯಾರ್ಥಿಗಳು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ ಎಂದರು.
ಮಹಾತ್ಮಾ ಗಾಂಧೀಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನವು ಈ ಭಾಗದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನೇ ನೀಡಿದವು. ಇಲ್ಲಿನ ಐತಿಹಾಸಿಕ ದಾಖಲೆಗಳು, ಪತ್ರಾಗಾರದ ದಾಖಲೆಗಳು, ನಮ್ಮ ಯುವಪೀಳಿಗೆಗೆ ದೇಶಪ್ರೇಮದ ಪಾಠ ಕಲಿಸಬೇಕು ಎಂದರು.ಪ್ರಾಂಶುಪಾಲೆ ಡಾ. ಸಂಗೀತಾ ಕಟ್ಟೀಮನಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗೆಜೆಟಿಯರ್ ಇಲಾಖೆಯ ಜಂಟಿ ನಿರ್ದೇಶಕಿ ಮಂಜುಳಾ ಎಲಿಗಾರ, ಧಾರವಾಡ ವಿಭಾಗ ಕಚೇರಿಯ ಉಪ ನಿರ್ದೇಶಕಿ ಶಶಿಕಲಾ ವಿ.ಹುಡೇದ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಮಂಗಳವಾಡ ಗ್ರಾಮದ ಮಂಗೇಶ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳಗ್ಗೆ ನಡೆದ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಶ್ಮಿ ತುರಮರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಮಟಾದ ಪ್ರೊ. ಪ್ರಮೋದ ಹೆಗಡೆ ಅವರು "ಮುಂಬೈ ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ-ಉತ್ತರಕನ್ನಡ ಜಿಲ್ಲೆಯ ವಿಶೇಷ ಉಲ್ಲೇಖದೊಂದಿಗೆ ", ದಾಂಡೇಲಿಯ ಡಾ. ಬಸವರಾಜ ಅಕ್ಕಿ ಅವರು "ಮುಂಬೈ ಕರ್ನಾಟಕದಲ್ಲಿ ಅಸಹಕಾರ ಚಳುವಳಿ ", ಧಾರವಾಡದ ಡಾ. ಎಸ್.ಎಸ್.ಅಂಗಡಿ ಅವರು "ಮುಂಬೈ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ " ವಿಷಯಗಳ ಕುರಿತು ಮಾತನಾಡಿದರು. ಬಳಿಕ ಸಂಶೋಧನಾ ಪ್ರಬಂಧಗಳ ಮಂಡನೆಯಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪಡಿಯಪ್ಪ ನಾಗರಾಳ ಅವರು ನಿರ್ವಹಿಸಿದರು.ಮಧ್ಯಾಹ್ನದ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಗೌಡ ವಹಿಸಿದ್ದರು. ಹಂಸಭಾವಿಯ ಡಾ. ಎಂ.ಎಂ.ಅಕ್ಕಿ ಅವರು "ಹಾವೇರಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ " ಹಾಗೂ ಧಾರವಾಡದ ಡಾ. ಸಿದ್ದು ಬಜಂತ್ರಿ ಅವರು "1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ " ಕುರಿತು ಪ್ರಬಂಧ ಮಂಡಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಷ್ಮಾ ಪಾಟೀಲ ನಿರ್ವಹಿಸಿದರು.
ಸಂಜೆ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಸಂಗೀತಾ ಕಟ್ಟೀಮನಿ ಅಧ್ಯಕ್ಷತೆ ವಹಿಸಿದ್ದರು. ಹವಗಿ ಗ್ರಾಮ ಪಂಚಾಯಿತಿ ಪಿಡಿಒ ಮಹಾಂತೇಶ ಹುರಕಡ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಮಾನಪ್ಪ ಹೊನಕಾಂಬಳೆ, ಗ್ರಂಥಪಾಲಕ ಡಾ. ಮಂಜುನಾಥ ಜಿ.ಲಮಾಣಿ, ಹಿಂದಿ ವಿಭಾಗದ ಮುಖ್ಯಸ್ಥೆ ಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ಶಾಹಜಹಾನ್ ಡಾಂಗೆ, ಅಧೀಕ್ಷಕ ಮಾಲತೇಶ ಹುಲಮನಿ, ಐಕ್ಯೂಎಸಿ ಸಂಚಾಲಕ ಡಾ. ರಂಜನಾ ಭಂಡಾರೆ, ಸಂಘಟನಾ ಕಾರ್ಯದರ್ಶಿ ಡಾ. ವೈ.ಐ.ಚೌಹಾಣ, ಡಾ. ಧನರಾಜ ಕೆಂದೂರು, ಇತಿಹಾಸ ವಿಭಾಗದ ಮುಖ್ಯಸ್ಥ ವಿಠಲ ಕಿತ್ತೂರು, ಸಂಶೋಧನಾ ಕೋಶದ ಸಂಚಾಲಕ ಡಾ. ಭೀಮರಾಯ ಬಿರಾದಾರ, ಸಹ ಸಂಯೋಜಕ ಪ್ರಭುಸ್ವಾಮಿ ಹಿರೇಮಠ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.