ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದ ೧೦೨ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಯಲ್ಲಾಪುರ ಕೂಡ ಒಳಗೊಂಡಿವೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಮುಂಡಗೋಡ/ಯಲ್ಲಾಪುರ: ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದ ೧೦೨ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಯಲ್ಲಾಪುರ ಕೂಡ ಒಳಗೊಂಡಿವೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡದ ಅವರು, ಅತಿ ಕಡಿಮೆ ಮಳೆಯಾದ ಪಟ್ಟಿಯಲ್ಲಿ ಈ ತಾಲೂಕುಗಳಿರುವ ಕಾರಣ ಬರಗಾಲ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹೊಂದಿಕೆ ಆದರೆ ಮಾತ್ರ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ಗೈಡ್‌ಲೈನ್ಸ್‌ನಲ್ಲಿ ಬಂದಿರುವ ಕಾರಣಕ್ಕೆ ಈ ತಾಲೂಕುಗಳು ಪ್ರಾಥಮಿಕ ಹಂತದಲ್ಲಿ ಬರಗಾಲ ಪ್ರದೇಶ ಎಂದು ಘೋಷಣೆಯಾಗಿವೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.ಬರಗಾಲ ಪ್ರದೇಶವಾದರೆ ರೈತರಿಗೆ ಪವಾಡವೇನೂ ಆಗುವುದಿಲ್ಲ. ಆದರೆ ಬೆಳೆ ಹಾನಿಯಾದವರಿಗೆ ಅಲ್ಪ ಸ್ವಲ್ಪ ಪರಿಹಾರ ಸಿಗುತ್ತದೆ ಎಂಬ ಆಶಾಭಾವನೆ ನಮ್ಮದಾಗಿದೆ. ಕಳೆದ ೨೦ ವರ್ಷಗಳಿಂದ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮಾರ್ಗಸೂಚಿ ಒಂದೇ ರೀತಿ ಇದ್ದು, ಅದನ್ನು ಹೆಚ್ಚಿಗೆ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮನವರಿಕೆ ಮಾಡಿದ್ದು, ಹಾನಿಯಾದವರಿಗೆ ಹೆಚ್ಚಿನ ಪರಿಹಾರ ಒದಗಿಸುವ ಬಗ್ಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಅಡಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ತಂಬಾಕು ಸೇವನೆಯಿಂದ ಮಾತ್ರ ಆರೋಗ್ಯಕ್ಕೆ ಅಪಾಯಕಾರಿ, ಅಡಕೆ ಸೇವನೆಯಿಂದ ಯಾವುದೇ ಅಪಾಯವಿಲ್ಲ ಎಂಬ ಬಗ್ಗೆ ವೈಜ್ಞಾನಿಕ ಪರಿಶೋಧನೆ ಕೂಡ ಆಗಿದೆ. ಗುಟ್ಕಾ ನಿಷೇಧಿಸುವ ಬಗ್ಗೆ ನಮ್ಮದೇನೂ ಆಕ್ಷೇಪಣೆಗಳಿಲ್ಲ. ಅಡಕೆ ಬೆಳೆಗಾರರಿಗೆ ತೊಂದರೆಯಾಗುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವರಿಕೆ ಮಾಡಲಾಗಿದ್ದು, ಇದನ್ನು ಅರಿತ ಮುಖ್ಯಮಂತ್ರಿಗಳು ಅಡಕೆ ಉತ್ಪನ್ನಗಳ ನಿಷೇಧ ಆದೇಶವನ್ನು ಹಿಂಪಡೆಯುವ ಮೂಲಕ ಅಡಕೆ ಬೆಳೆಗಾರ ರೈತರ ಆತಂಕವನ್ನು ದೂರ ಮಾಡಿದ್ದಾರೆ. ಯಾವುದೇ ಬೆಳೆ ಬೆಳೆಯುವ ರೈತರು ಆತಂಕದಲ್ಲಿರುವ ಬಗ್ಗೆ ಅರಿತು ಸೂಕ್ತ ಕ್ರಮ ಕೈಗೊಳ್ಳುವುದೇ ನಿಜವಾದ ಪ್ರಜಾಪ್ರಭುತ್ವ ಸರ್ಕಾರದ ಕ್ರಮವಾಗಿದ್ದು, ಇದು ಅಭಿನಂದನಾಪೂರಕವಾದ ಆದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಭಿನಂದಿಸಿದರು. ಲಕ್ಷ್ಮಣ ಸವದಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದು, ಅವರೊಬ್ಬ ಅನುಭವಿ ಸಹಕಾರಿ ಸಚಿವರಾಗಿದ್ದಾರೆ. ಅವರೊಂದಿಗೆ ಎಲ್ಲ ಶಾಸಕರು ಸೇರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಗುಡ್ಡಪ್ಪ ಕಾತೂರ, ಪರಶುರಾಮ ತಹಸೀಲ್ದಾರ, ವೈ.ಪಿ. ಬುಜಂಗಿ, ಮಲ್ಲಿಕಾರ್ಜುನ ಗೌಳಿ, ಗೌಸ ಮಖಾಂದಾರ ಉಪಸ್ಥಿತರಿದ್ದರು.