ಸಾರಾಂಶ
ಮುಂಡಗೋಡ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ಬಹುತೇಕ ಬಸ್‌ಗಳೆಲ್ಲ ಯಲ್ಲಾಪುರ, ಹಾನಗಲ್, ಶಿರಸಿ, ಹಳಿಯಾಳ ಹೀಗೆ ಸುತ್ತಮುತ್ತಲಿನ ಡಿಪೋ ಬಸ್‌ಗಳಾಗಿದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಸ್ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ರಸ್ತೆ ತಡೆ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ
ಸಂತೋಷ ದೈವಜ್ಞ ಮುಂಡಗೋಡ
ಪಟ್ಟಣದಲ್ಲಿ ₹೪ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸಾರಿಗೆ ಸಂಸ್ಥೆ ಬಸ್ (ಘಟಕ) ಡಿಪೋ ಉದ್ಘಾಟನೆಗೆ ಸಜ್ಜಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಮುಂಡಗೋಡ ತಾಲೂಕಿನ ಜನತೆಯ ಬಹುದಿನಗಳ ಕನಸು ನನಸಾಗುತ್ತಿದೆ.ಕಳೆದ 30 ವರ್ಷಗಳ ಹಿಂದಿನಿಂದಲೂ ಮುಂಡಗೋಡಗೆ ಬಸ್ ಡಿಪೋ ಆಗಬೇಕೆಂಬ ಬೇಡಿಕೆ ಇಲ್ಲಿಯ ಜನತೆಯದ್ದಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುತ್ತಮುತ್ತ ತಾಲೂಕುಗಳಲ್ಲಿ ಬಸ್ ಡಿಪೋ ನಿರ್ಮಾಣವಾದರೂ ಮುಂಡಗೋಡದಲ್ಲಿ ಬಸ್ ಡಿಪೋ ನಿರ್ಮಾಣವಾಗಿರಲಿಲ್ಲ. ೨೦೧೦ ಬಿಜೆಪಿ ಸರ್ಕಾರದಲ್ಲಿ ಅಂದಿನ ಶಾಸಕ ವಿ.ಎಸ್. ಪಾಟೀಲ ಈ ಬಗ್ಗೆ ತೀವ್ರ ಆಸಕ್ತಿ ವಹಿಸಿ ಬಸ್ ಡಿಪೋ ನಿರ್ಮಾಣಕ್ಕೆ ಜಾಗ ಗುರುತಿಸಿ ತಡೆಗೋಡೆ ನಿರ್ಮಾಣ ಮಾಡಿಸಿದರು. ಆದರೆ ಈ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಅಲ್ಲಿಗೆ ನಿಂತುಹೋಯಿತು.
ಸುಮಾರು ೧೨ ವರ್ಷಗಳ ನಂತರ ೨೦೨೨ರಲ್ಲಿ ಕಾರ್ಮಿಕ ಸಚಿವ, ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಜಾಗದ ಸಮಸ್ಯೆ ಇತ್ಯರ್ಥಗೊಂಡು ಬಸ್ ಡಿಪೋ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದು ಸಾರಿಗೆ ಸಚಿವ ಶ್ರೀರಾಮುಲು ಅವರ ಅಮೃತಹಸ್ತದಿಂದ ಶಿಲಾನ್ಯಾಸಗೊಂಡು ಕಾಮಗಾರಿಗೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಮುಂಡಗೋಡ ತಾಲೂಕಿನ ಜನತೆಗೆ ತೀವ್ರ ಬೇಸರವನ್ನುಂಟು ಮಾಡಿತ್ತು. ಆ ನಂತರದಲ್ಲಿ ತೀವ್ರಗತಿಯಲ್ಲಿ ನಡೆದ ಬಸ್ ಡಿಪೋ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುತ್ತಿದ್ದು, ಸಮರ್ಪಕ ಬಸ್ ವ್ಯವಸ್ಥೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದೆ.ಪ್ರತಿಭಟನೆಗೆ ಈಗಲಾದರೂ ಬ್ರೇಕ್ ಬೀಳಲಿದೆಯೇ?
ಮುಂಡಗೋಡ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ಬಹುತೇಕ ಬಸ್‌ಗಳೆಲ್ಲ ಯಲ್ಲಾಪುರ, ಹಾನಗಲ್, ಶಿರಸಿ, ಹಳಿಯಾಳ ಹೀಗೆ ಸುತ್ತಮುತ್ತಲಿನ ಡಿಪೋ ಬಸ್‌ಗಳಾಗಿದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಸ್ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ರಸ್ತೆ ತಡೆ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಸಾರಿಗೆ ಇಲಾಖೆ ಅಧಿಕಾರಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರಿಗೆ ಆ ಡಿಪೋ ಈ ಡಿಪೋ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡುವ ಮೂಲಕ ಸಮಾಧಾನಪಡಿಸುವುದು ಇಲ್ಲಿ ಸಾಮಾನ್ಯವಾಗಿತ್ತು. ದಿನ ಬೆಳಗಾದರೆ ಒಂದಿಲ್ಲೊಂದು ಭಾಗದ ಜನ ಬಸ್‌ಗಾಗಿ ಪ್ರತಿಭಟಿಸುತ್ತಲೇ ಇದ್ದರು. ವಾಸ್ತವವಾಗಿ ಹೇಳಬೇಕಾದರೆ ಪ್ರಯಾಣಿಕರನ್ನು ಸಮಾಧಾನಪಡಿಸಲು ಸ್ಥಳೀಯ ಸಾರಿಗೆ ನಿಯಂತ್ರಕರು ಪರದಾಡಿದ ಪರಿ ಆ ದೇವರಿಗೆ ಪ್ರೀತಿ.ಈಗ ಸುಸಜ್ಜಿತವಾದ ಬಸ್ ಡಿಪೋ ಕಟ್ಟಡ ನಿರ್ಮಾಣಗೊಂಡಿದ್ದು, ಈಗಲಾದರೂ ಸಮರ್ಪಕ ಬಸ್ ಸಂಚಾರ ಆರಂಭಗೊಂಡು ಸಾರ್ವಜನಿಕರ ಸಮಸ್ಯೆ ದೂರವಾಗಲಿದೆಯೇ ಕಾದು ನೋಡಬೇಕಿದೆ.
ಮುಂಡಗೋಡ ಘಟಕದಿಂದ ಹೊರಡುವ ಸುಮಾರು ೫೦ ಬಸ್‌ಗಳ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಬಸ್ ಘಟಕದ ಡೀಸೆಲ್ ಪಂಪ್‌ಗೆ ಅನುಮೋದನೆ ಸಿಗಬೇಕಿದೆ. ಅನುಮೋದನೆ ದೊರೆತ ಬಳಿಕ ಕಾರ್ಯಾಚರಣೆ ಆರಂಭ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಶ್ರೀನಿವಾಸ ಕೆ.ಎಚ್. ಹೇಳಿದ್ದಾರೆ.