ಮುಂಡಗೋಡ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ೭ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಅದ್ದೂರಿ ರಥೋತ್ಸವ ಮೆರವಣಿಗೆಯೊಂದಿಗೆ ಜಾತ್ರಾ ಪಾದಗಟ್ಟಿ ಗದ್ದುಗೆಯಲ್ಲಿ ಆಸೀನಳಾಗಲು ದೇವಿ ಸಿದ್ದವಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇಂದು ದೇವಿಯ ರಥೋತ್ಸವ । ೯ ದಿನಗಳ ಕಾಲ ವಿಜೃಂಭಣೆಯಿಂದ ಆಚರಣೆ
ಸಂತೋಷ ದೈವಜ್ಞಕನ್ನಡಪ್ರಭ ವಾರ್ತೆ ಮುಂಡಗೋಡ
ಮುಂಡಗೋಡ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ೭ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಅದ್ದೂರಿ ರಥೋತ್ಸವ ಮೆರವಣಿಗೆಯೊಂದಿಗೆ ಜಾತ್ರಾ ಪಾದಗಟ್ಟಿ ಗದ್ದುಗೆಯಲ್ಲಿ ಆಸೀನಳಾಗಲು ದೇವಿ ಸಿದ್ದವಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಕಾತರದಿಂದ ಕಾಯುತ್ತಿದ್ದಾರೆ.ಜಾತ್ರೆಯು ಫೆ.೧೧ರವರೆಗೆ ೯ ದಿನಗಳ ಕಾಲ ಜರುಗಲಿದೆ. ದೇವಿಯ ಪ್ರತಿಷ್ಠಾಪನೆಗೆ ಜಾತ್ರಾ ಗದ್ದುಗೆಯ ಸುತ್ತ ಸುಂದರವಾದ ಚೌತ್ ಮನೆ ನಿರ್ಮಿಸಲಾಗಿದೆ. ಕಾರ್ಯನಿಮಿತ್ತ ದೂರದ ಊರಿಗೆ ವಲಸೆ ಹೋದವರೆಲ್ಲ ಮರಳಿ ಊರು ಸೇರಿದ್ದು, ಪಟ್ಟಣದ ಪ್ರತಿ ಮನೆ ಮನೆಗಳಲ್ಲಿ ಕೂಡ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಿಯ ಅನುಗ್ರಹ ಪ್ರಾಪ್ತಿಸಿಕೊಳ್ಳುವ ಉದ್ದೇಶದಿಂದ ೩ ವರ್ಷಕ್ಕೊಂದು ಬಾರಿ ೯ ದಿನಗಳ ಕಾಲ ಗ್ರಾಮ ದೇವಿ ಶ್ರೀ ಮಾರಿಕಾಂಬೆ ಜಾತ್ರೆ ನಡೆಸಲಾಗುತ್ತದೆ.ಐತಿಹಾಸಿಕ ಜಾತ್ರೆ:
ಮುಂಡಗೋಡ ಗ್ರಾಮದೇವಿ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ೮೦ ವರ್ಷಗಳ ಹಿಂದೆ ಕಾರಣಾಂತರಗಳಿಂದ ಜಾತ್ರೆ ಸ್ಥಗಿತಗೊಂಡಿತ್ತು. ೨೦೦೭ರಲ್ಲಿ ಮತ್ತೆ ದೇವಾಲಯ ಕಮೀಟಿ ರಚಿಸಿ ೩ ವರ್ಷಕ್ಕೊಮ್ಮೆ ಜಾತ್ರೆ ನಡೆಸುವ ಬಗ್ಗೆ ದೃಢ ಸಂಕಲ್ಪ ಮಾಡಿ ಜಾತ್ರೆಯನ್ನು ಪುನಃ ಪ್ರಾರಂಭಿಸಲಾಯಿತು. ಈಗಾಗಲೇ ೬ ಜಾತ್ರೆಗಳು ಸಕಲ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದ್ದು, ಇದು ೭ನೇ ಜಾತ್ರೆಯಾಗಿದೆ.ಸಂಪ್ರದಾಯ:ದೇವಿಯ ತವರು ಮನೆ ನ್ಯಾಸರ್ಗಿ ಗ್ರಾಮದಲ್ಲಿ ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸುವ ಮೂಲಕ ಜಾತ್ರಾ ಕಾರ್ಯ ಪ್ರಾರಂಭಿಸಲಾಗುತ್ತದೆ. ಜಾತ್ರೆ ಮುಗಿಯುವವರೆಗೂ ಪ್ರತಿ ದಿನ ದೇವಿಗೆ ಪ್ರಥಮ ಪೂಜೆ ನೆರವೇರಿಸಲಾಗುತ್ತದೆ. ಇಷ್ಟಾರ್ಥ ಈಡೇರಿಸುವ ದೇವಿ ಎಂದೇ ಹೆಸರಾಗಿರುವ ದೇವಿಗೆ ಭಕ್ತಾಧಿಗಳಿಂದ ಬಲಿ ನೀಡುವ ಪದ್ದತಿ ಕೂಡ ಇದೆ. ಗ್ರಾಮ ದೇವಿಯ ಯಾವುದೇ ವಿಶೇಷ ಧಾರ್ಮಿಕ ಕಾರ್ಯ ನಡೆಯುವಾಗ ಸಂಪ್ರದಾಯಿಕವಾಗಿ ಪ್ರಥಮ ಪೂಜೆ ನ್ಯಾಸರ್ಗಿ ಗ್ರಾಮದವರಿಂದಲೇ ನಡೆಯಬೇಕು.
ವಿಸರ್ಜನಾ ಮೆರವಣಿಗೆ:೯ ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯುವ ದೇವಿಯ ಜಾತ್ರೆ ಕೊನೆ ದಿನವಾದ ಫೆ. ೧೧ರಂದು ಸಂಜೆ ೪ ಘಂಟೆಗೆ ದೇವಿಯ ವಿಸರ್ಜನಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸುತ್ತದೆ. ಬಳಿಕ ಪಟ್ಟಣದ ಶಾಸಕರ ಮಾದರಿ ಶಾಲೆ ಬಳಿ ಇರುವ ಗದ್ದುಗೆಗೆ ತೆರಳಿ ಬಳಿಕ ಧಾರ್ಮಿಕ ವಿಧಿ ವಿಧಾನದೊಂದಿಗೆ ಮೂರ್ತಿ ಬಿಚ್ಚಿ ವಿಸರ್ಜನಾ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಮಾ. ೧೯ ಯುಗಾದಿಯಂದು ದೇವಿಯ ಮರು ಪ್ರತಿಷ್ಠಾಪನೆ ಜರುಗುತ್ತದೆ.ಸಮಾರಂಭದ ವಿವರ:ಫೆ. ೩ರಂದು ಸಂಜೆ ಮಾಂಗಲ್ಯಧಾರಣೆ ಶಾಸ್ತ್ರ ಪೂಜಾ ವಿಧಿ ವಿಧಾನಗಳೊಂದಿಗೆ ನಡೆದಿದ್ದು, ಫೆ. ೪ರಂದು ಬೆಳಗ್ಗೆ ೮ ಗಂಟೆಯಿಂದ ದೇವಿಯ ರಥೋತ್ಸವ ಪ್ರಾರಂಭವಾಗಿ ಮಧ್ಯಾಹ್ನ ೧.೩೦ಕ್ಕೆ ಚೌತ ಮನೆ ಪ್ರವೇಶಿಸಿ ದೇವಿಯ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಯಾಗಿ ಬಳಿಕ ಅನ್ನಸಂತರ್ಪಣೆ ಜರುಗುತ್ತದೆ. ಫೆ. ೫ ರಿಂದ ಬೆಳಗ್ಗೆ ೭ರಿಂದ ರಾತ್ರಿ ೧೦ರವರೆಗೆ ಹಾಗೂ ಫೆ. ೧೧ರಂದು ಮಧ್ಯಾಹ್ನ ೨ರವರೆಗೆ ಸಾರ್ವಜನಿಕ ಉಡಿ ಮತ್ತು ಹಣ್ಣು ಕಾಯಿ ಸೇವೆ ನಡೆಯುತ್ತದೆ.