ವಾರ್ಷಿಕ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ಕಡಿಮೆ ಬಾಡಿಗೆ ನಿಗದಿಪಡಿಸಿ ಮರು ಟೆಂಡರ್ ಕರೆಯಬೇಕು.
ಮುಂಡಗೋಡ: ಪಪಂಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣಗಳಿಗೆ ಹೆಚ್ಚು ಬಾಡಿಗೆ ನಿಗದಿಪಡಿಸಿ ಟೆಂಡರ್ ಕರೆಯುವುದರಿಂದ ಯಾರು ಕೂಡ ಬರುತ್ತಿಲ್ಲ. ಇದರಿಂದ ಪಟ್ಟಣದ ಹತ್ತಾರು ಕಡೆಯಲ್ಲಿ ಅಂಗಡಿಗಳು ಖಾಲಿ ಇರುವುದರಿಂದ ವಾರ್ಷಿಕ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ಕಡಿಮೆ ಬಾಡಿಗೆ ನಿಗದಿಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಪಪಂ ಸದಸ್ಯರು ಒತ್ತಾಯಿಸಿದರು.ಗುರುವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಸದಸ್ಯರು, ಎಲ್ಲದಕ್ಕೂ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುಮತಿಗಾಗಿ ಕಾಯುತ್ತಾ ಕುಳಿತುಕೊಳ್ಳಲಾಗುವುದಿಲ್ಲ. ಆಡಳಿತ ಕಮಿಟಿ ಠರಾವು ಮಾಡಿ ಈ ನಿರ್ಧಾರ ಕೈಗೊಳ್ಳುವಂತೆ ಸರ್ವ ಸದಸ್ಯರು ಆಗ್ರಹಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಕಳೆದ ಸುಮಾರು ೧೦ ವರ್ಷಗಳಿಂದ ಹರಾಜು ನಡೆಸಲಾಗಿಲ್ಲ. ಹಳಬರಿಗೆನೇ ಮುಂದುರೆಸಿಕೊಂಡು ಬರಲಾಗಿದೆ. ಇದರಿಂದ ಬೇರೆಯವರಿಗೆ ಸಿಗುತ್ತಿಲ್ಲ. ಹಾಗಾಗಿ ಕೆರೆಗಳಿಗೆ ಮರು ಟೆಂಡರ್ ಕರೆಯುವ ಮೂಲಕ ಇತರರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಪಂ ಸದಸ್ಯೆ ನಿರ್ಮಲಾ ಬೆಂಡ್ಲಗಟ್ಟಿ ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಾಧಿಕಾರಿ ಕುಮಾರ ನಾಯ್ಕ, ಈ ಬಗ್ಗೆ ಮೀನುಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದ ನಂದೀಶ್ವರ ನಗರ ಬಡಾವಣೆಯ ಕೆರೆಯ ಹೆಚ್ಚುವರಿ ನೀರು ಹರಿದು ಹೋಗಲು ಸಮರ್ಪಕ ಕಾಲುವೆ ವ್ಯವಸ್ಥೆ ಇಲ್ಲದ ಕಾರಣ ಮಳೆಗೆ ಕೆರೆ ತುಂಬಿ ಸುತ್ತಮುತ್ತಲ ಮನೆಗಳು ಜಲಾವೃತವಾಗುತ್ತಿವೆ. ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಹಾಗೂ ರೈತರು ಮಸಲ್ಲಿಸಿದ ಮನವಿ ಬಗ್ಗೆ ತೀವ್ರ ಚರ್ಚೆ ನಡೆದು ಈ ಬಗ್ಗೆ ತಹಸೀಲ್ದಾರ ಹಾಗೂ ಭೂಮಾಪನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸರಾಗವಾಗಿ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ಸಭೆಯಲ್ಲಿ ತಿಳಿಸಿದರು.ಪಟ್ಟಣದ ನಗರಸಭಾ ಭವನದಲ್ಲಿ ಶೌಚಾಲಯ ಸೇರಿ ಮೂಲಭೂತ ಸೌಲಭ್ಯದ ಕೊರತೆಯಿಂದಾಗಿ ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಪಂಗೆ ಆದಾಯ ಕಡಿಮೆಯಾಗಿದೆ. ತಕ್ಷಣ ಈ ಬಗ್ಗೆ ಗಮನಹರಿಸಿ ಸಭಾ ಭವನಕ್ಕೆ ಊಟದ ಹಾಲ್, ಶೌಚಾಲಯ ಸೇರಿ ಅಗತ್ಯ ಸೌಲಭ್ಯ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಪಪಂ ಆದಾಯ ಹೆಚ್ಚಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪಟ್ಟಣದ ಬಹುತೇಕ ಬಡಾವಣೆಗಳ ಚರಂಡಿ ಸ್ವಚ್ಛಗೊಳಿಸಲಾಗಿಲ್ಲ. ಅಲ್ಲಲ್ಲಿ ಕಸದ ರಾಶಿಯಿಂದ ತುಂಬಿಕೊಂಡಿದ್ದು, ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಸ್ವಚ್ಛತಾ ವಿಭಾಗ ಸಿಬ್ಬಂದಿ ವಿವೇಕ ಪಾಟೀಲ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಕ್ಷಣ ಸ್ವಚ್ಛತಾ ಕ್ರಮ ಕಗೊಳ್ಳುವಂತೆ ಸೂಚಿಸಿದರು.ಪಪಂ ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಶ್ರೀಕಾಂತ ಸಾನು ಫಣಿರಾಜ ಹದಳಗಿ, ಅಶೋಕ ಚಲವಾದಿ, ವಿಶ್ವನಾಥ ಪವಾಡಶೆಟ್ಟರ, ಮಹ್ಮದಗೌಸ ಮಖಾಂದಾರ, ರಜಾ ಪಠಾಣ, ಮಂಜುನಾಥ ರ‍್ಮಲಕರ, ಶೇಖರ ಲಮಾಣಿ, ನಿರ್ಮಲಾ ಬೆಂಡ್ಲಗಟ್ಟಿ, ಬೀಬಿಜಾನ್ ಮುಲ್ಲಾನವರ, ಶಕುಂತಲಾ ನಾಯಕ, ಮಹ್ಮದಜಾಫರ್ ಹಂಡಿ, ಜೈನು ಬೆಂಡಿಗೇರಿ, ನಾಗರಾಜ ಹಂಚಿನಮನಿ ಹಾಗೂ ಎಂಜಿನಿಯರ್ ಗಣೇಶ ಭಟ್, ವ್ಯವಸ್ಥಾಪಕ ಪ್ರದೀಪ ಹೆಗಡೆ, ಮಂಚಲಾ ಶೇಟ್ ಉಪಸ್ಥಿತರಿದ್ದರು.