ಸಾರಾಂಶ
ಮುಂಡರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಇತ್ತೀಚೆಗೆ ಮುಂಡರಗಿ ತಾಲೂಕಿನ ಮೇವುಂಡಿ, ಮುಂಡರಗಿ ಹಾಗೂ ಕೊರ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಕುಂದು-ಕೊರತೆ ಆಲಿಸಿದರು.
ಮೇವುಂಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ತಹಸೀಲ್ದಾರ್ ಎರ್ರಿಸ್ವಾಮಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೇವುಂಡಿ ಗ್ರಾಮದಲ್ಲಿ ಬುಡುಗ ಜಂಗಮ ಜನಾಂಗದ ಒಟ್ಟು 13 ಕುಟುಂಬಗಳಿದ್ದು, ಅದರಲ್ಲಿ 4 ಕುಟುಂಬಗಳಿಗೆ ವಾಸಿಸಲು ಮನೆಯಿದ್ದು, ಇನ್ನು 9 ಕುಟುಂಬಗಳಿಗೆ ಮನೆ ಇಲ್ಲ ಎಂದು ಸಮುದಾಯದವರು ತಿಳಿಸಿದರು.ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ, ಗ್ರಾಮದಲ್ಲಿ ಸರ್ಕಾರಿ ಜಮೀನು (ಜಾಗ) ಇದ್ದಲ್ಲಿ ನಿವೇಶನ ಕಲ್ಪಿಸುವುದು, ಇಲ್ಲದೆ ಇದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ನಿವೇಶನ ಕಲ್ಪಿಸಲು ಸರ್ಕಾರದ ನಿಯಮಾವಳಿ ಪ್ರಕಾರ ಅವಕಾಶ ಇರುವುದರಿಂದ ಅವರಿಗೆ ನಿವೇಶನ ಕಲ್ಪಿಸಿಕೊಡಲು ಮತ್ತು ಜಾತಿ ಆದಾಯ ಪ್ರಮಾಣಪತ್ರ ಹಾಗೂ ಪಡಿತರ ಚೀಟಿ ಎಲ್ಲರಿಗೂ ತಲುಪಿಸುವಂತೆ ತಿಳಿಸಿದರು.
ನಂತರ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಿಶೀಲತಾ ಅಭಿವೃದ್ಧಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಭೂ ಒಡೆತನ ಯೋಜನೆ, ಸಮಗ್ರ ಗಂಗಾ ಕಲ್ಯಾಣ ಯೋಜನೆಗಳಲ್ಲಿ ಇರುವಂತಹ ಸೌಲಭ್ಯಗಳ ಕುರಿತು ತಿಳಿಸಿ ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಮುಂಡರಗಿ ಪಟ್ಟಣದ ಕಡ್ಲಿಪೇಟೆ ಓಣಿಯಲ್ಲಿ ವಾಸಿಸುವ ಕೊರಮ ಜನಾಂಗದವರ ಕಾಲನಿಗೆ ಭೇಟಿ ನೀಡಿ ಅಲ್ಲಿನ ಕುಂದು-ಕೊರತೆಗಳ ಮಾಹಿತಿ ಪಡೆದರು. ಇಲ್ಲಿ ನಿವೇಶನ ಇಲ್ಲದೆ ಸರ್ಕಾರಿ ಜಾಗದಲ್ಲಿ ಜೋಪಡಿ ಹಾಕಿಕೊಂಡು ವಾಸಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ, ನಿವೇಶನ ಇಲ್ಲದ ಕುಟುಂಬದವರಿಗೆ ನಿವೇಶನ ವ್ಯವಸ್ಥೆ ಕಲ್ಪಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ನಿವೇಶನರಹಿತ ಪಟ್ಟಿಯಲ್ಲಿ 35 ಕುಟುಂಬ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 28 ಜನರ ಅರ್ಜಿ ಆಯ್ಕೆಯಾಗಿದ್ದು, 2 ತಿಂಗಳಲ್ಲಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಶಿಥಿಲಗೊಂಡ ಮನೆಗಳನ್ನು ಪರಿಶೀಲಿಸಿ, ಅವರಿಗೂ ಮರು ನಿರ್ಮಾಣ ಮನೆ ಹಾಕಿಸಿ ಕೊಡುವಂತೆ ಸೂಚಿಸಿದರು.ಸ್ಲಂ ಬೋರ್ಡ್‌ನಿಂದ ಫಲಾನುಭವಿಗಳು ₹50 ಸಾವಿರ ವಂತಿಕೆ ತುಂಬಿದರೆ ಇದ್ದ ಮನೆಗಳನ್ನು ತೆರವುಗೊಳಿಸಿ ಹೊಸದಾಗಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಸಮುದಾಯದವರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.ಆನಂತರ ಕೊರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಶಿಳ್ಳಿಕ್ಯಾತರ ಸಮುದಾಯದ ಜನತೆ ವಾಸಿಸುತ್ತಿರುವ ಕಾಲನಿಗಳಿಗೆ ಭೇಟಿ ನೀಡಿದರು.
ತಹಸೀಲ್ದಾರ್ ಎರ್ರಿಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರುಣಾ ಸೊರಗಾವಿ, ಸಿಪಿಐ ಮಂಜುನಾಥ ಕುಸುಗಲ್ ಉಪಸ್ಥಿತರಿದ್ದರು.