ಸಾರಾಂಶ
ಶರಣು ಸೊಲಗಿ ಮುಂಡರಗಿ
1992ರಲ್ಲಿ ಗದುಗಿನ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮೀಜಿ, ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಉದ್ಘಾಟಿಸಿದ ಸುಂದರವಾದ ಉದ್ಯಾನವನ ಇದೀಗ ಮಕ್ಕಳಿಗೆ ಕ್ರಿಕೆಟ್ ಮೈದಾನ, ಕಬ್ಬಿನ ಸಿಪ್ಪೆ ಹಾಕುವವರಿಗೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.ಅಂದ-ಚಂದದ ಹೂವಿನ ಗಿಡಗಳು, ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಹುಲ್ಲಿನ ಹಾಸಿಗೆ, ಮಕ್ಕಳಿಗಾಗಿ ಜೋಕಾಲಿ, ಜಾರುಬಂಡೆ, ಸುಂದರವಾದ ಸೌಂಡ್ ಸಿಸ್ಟಮ್, ಝಗಮಗಿಸುವ ಕಾರಂಜಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ಮುಂಡರಗಿ ಪುರಸಭೆಯ ಪೊಲೀಸ್ ಪರೇಡ್ ಮೈದಾನದ ಪಕ್ಕದಲ್ಲಿನ ಉದ್ಯಾನವನ ಇಂದು ಎಲ್ಲವನ್ನೂ ಕಳೆದುಕೊಂಡು ಹಾಳು ಮಣ್ಣಿನ ರಸ್ತೆಯಂತಾಗಿದೆ.
ಮುಂಡರಗಿ ಪುರಸಭೆ ಕಾರ್ಯಾಲಯದ ಪೊಲೀಸ್ ಪರೇಡ್ ಮೈದಾನದ ಹತ್ತಿರವಿರುವ ಉದ್ಯಾನವನದಲ್ಲಿ ಇಂದು ಯಾವುದೇ ಒಂದು ಹೂವಿನ ಗಿಡ, ಶೋ ಗಿಡ, ಹುಲ್ಲಿನ ಹಾಸಿಗೆ ಇಲ್ಲ. ಕೇವಲ ಉದ್ಯಾನವನದ ಸುತ್ತಲೂ ಬೆಳೆದಿರುವ ಗಿಡ ಹೊರತು ಪಡಿಸಿದರೆ ಇಲ್ಲಿ ಬೇರೆನೂ ಕಾಣ ಸಿಗುವುದಿಲ್ಲ. ಇದೀಗ ಅಲ್ಲಿ ನಿತ್ಯವೂ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾರೆ.ಪಟ್ಟಣ್ಣದಲ್ಲಿರುವ ಬಹುತೇಕ ಪುರಸಭೆ ಉದ್ಯಾನವನಗಳ ಪರಿಸ್ಥಿತಿ ಇಂದು ಇದೇ ರೀತಿಯಾಗಿದೆ. ತುಂಗಭದ್ರಾ ನಗರ (ಹುಡ್ಕೋ ಕಾಲನಿ)ಯಲ್ಲಿರುವ ಉದ್ಯಾನವನದಲ್ಲಿಯೂ ಸಹ ಯಾವುದೇ ಗಿಡಗಳಿಲ್ಲದೇ ಖಾಲಿ ಖಾಲಿಯಾಗಿ ಕಸ ಬೆಳೆದು ನಿಂತಿದೆ. ಅದರಂತೆ ಕೆಇಬಿ ಹತ್ತಿರದ ಜೆ.ಎಚ್. ಪಟೇಲ್ ನಗರದಲ್ಲಿರುವ ಉದ್ಯಾನವನ ಈ ಹಿಂದೆ ಆ ಭಾಗದಲ್ಲಿನ ಎಲ್ಲ ಮಕ್ಕಳನ್ನೂ ಆಕರ್ಷಿಸುವಂತಿತ್ತು. ಆದರೆ ಇಂದು ಅದು ಸಹ ಹಾಳು ಬಿದ್ದಂತಾಗಿದೆ.
ಪಟ್ಟಣದ ರಾಮೇನಹಳ್ಳಿ ರಸ್ತೆಯ ಪುರಸಭೆಯ ಎರಡು ಉದ್ಯಾನವನಗಳಿದ್ದು, ಅದರಲ್ಲಿ ಒಂದನ್ನು ಸ್ಥಳೀಯ ಅನ್ನದಾನೀಶ್ವರ ಪಿಯು ಕಾಲೇಜಿನ ಎನ್.ಎಸ್.ಎಸ್. ಘಟಕ ದತ್ತು ಪಡೆದುಕೊಂಡಿತ್ತು. ಅಲ್ಲಿ ಅನೇಕ ಗಿಡ ನೆಟ್ಟಿದ್ದರು. ಇಂದು ಆ ಗಿಡಗಳು ಮಾತ್ರ ಬೆಳೆದು ನಿಂತಿವೆ. ಆದರೆ ಪುರಸಭೆಯಿಂದ ಉದ್ಯಾನವನದ ಆವರಣದಲ್ಲಿ ಸ್ವಚ್ಛತೆ ಕಾರ್ಯವಾಗಲಿ, ಉದ್ಯಾನವನ ಅಭಿವೃದ್ಧಿ ಪಡಿಸುವುದಾಗಲಿ ಏನೂ ಮಾಡಿಲ್ಲ. ಅಲ್ಲಿ ಅನೇಕರು ಸರಾಯಿ ಕುಡಿದು ಬಾಟಲು ಎಸೆದಿದ್ದಾರೆ. ತಿಂಡಿ-ತಿನಿಸು, ಊಟ ಮಾಡಿ ಎಲ್ಲ ಕಸ ಅಲ್ಲಿಯೇ ಹಾಕಿದ್ದಾರೆ. ಪುರಸಭೆ ಸಂಬಂಧ ಪಟ್ಟ ವಾರ್ಡಿನ ಸದಸ್ಯರಾಗಲಿ, ಪುರಸಭೆ ಸಿಬ್ಬಂದಿಯಾಗಲಿ ಇತ್ತ ತಿರುಗಿ ನೋಡಿಲ್ಲ.ಪಟ್ಟಣದಲ್ಲಿ ಪುರಸಭೆಯ ಅನೇಕ ಉದ್ಯಾನವನಗಳಿದ್ದು, ಎಲ್ಲಿಯೂ ಸಹ ಮಕ್ಕಳಿಗೆ ಆಟವಾಡುವಂತಹ ಜೋಕಾಲಿ, ಜಾರುಬಂಡಿ, ಆಟಿಕೆ ಇರುವಂತೆ ವ್ಯವಸ್ಥಿತವಾದ ಉದ್ಯಾನವನ ಎಲ್ಲಿಯೂ ಇಲ್ಲ. ಪುರಸಭೆ ಇಂತದ್ದೊಂದು ಮಾದರಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಬೇಕು ಅಥವಾ ಈ ಹಿಂದೆ ಇದ್ದ ಪುರಸಭೆ ಪಕ್ಕದ ಪೊಲೀಸ್ ಮೈದಾನದ ಉದ್ಯಾನವನವನ್ನಾದರೂ ಮತ್ತೆ ಮೊದಲಿನಂತೆ ಮಾಡಬೇಕೆನ್ನುವುದು ಪರಿಸರ ಪ್ರೀಯರ ಒತ್ತಾಯವಾಗಿದೆ.
ಮುಂಡರಗಿ ಪಟ್ಟಣದಲ್ಲಿ ಕೆಲವೇ ಪ್ರಮುಖ ಉದ್ಯಾನವನಗಳಿದ್ದು, ಪುರಸಭೆ ನಿಷ್ಕಾಳಜಿಯಿಂದ ಎಲ್ಲವೂ ಹಾಳು ಬಿದ್ದಿವೆ. ಪುರಸಭೆಯ 15ನೇ ಹಣಕಾಸು ಯೋಜನೆಯಲ್ಲಿ ಉದ್ಯಾನವನಗಳ ಅಭಿವೃದ್ದಿಗಾಗಿಯೇ ಹಣ ಕಾಯ್ದಿರಿಸಲಾಗುತ್ತಿದ್ದು, ಆ ಹಣ ಅವುಗಳ ಅಭಿವೃದ್ದಿಗಾಗಿಯೇ ಬಳಕೆ ಮಾಡಿಕೊಳ್ಳಬೇಕು. ಒಂದೊಂದು ಉದ್ಯಾನವನಕ್ಕೆ ಒಬ್ಬೊಬ್ಬ ಸಿಬ್ಬಂದಿ ನೇಮಕ ಮಾಡಿದರೆ ಮತ್ತೆ ಎಲ್ಲ ಉದ್ಯಾನವನ ಸುಂದರವಾಗಿ ನಗರವನ್ನು ಹಸಿರಾಗಿ ಕಾಣುವಂತೆ ಮಾಡುತ್ತವೆ ಎಂದು ಪರಿಸರವಾದಿ ಹಾಗೂ ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್.ಅರಸನಾಳ ತಿಳಿಸಿದ್ದಾರೆ.