ಪ್ರಕರಣವನ್ನು ಅಗತ್ಯ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗೆ ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು

ಮುಂಡಗೋಡ: ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ಕಾಮುಕ ವೃದ್ಧನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ವಿವಿಧ ಹಿಂದು ಪರ ಸಂಘಟನೆಗಳು ಗುರುವಾರ ನೀಡಿದ್ದ ಮುಂಡಗೋಡ ಬಂದ್ ಕರೆ ಸಂಪೂರ್ಣವಾಗಿ ಯಶಸ್ವಿಯಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಶಿರಸಿ-ಹುಬ್ಬಳ್ಳಿ ರಸ್ತೆ ಮೂಲಕ ಶಿವಾಜಿ ಸರ್ಕಲ್ ನಿಂದ ಅಂಬೇಡ್ಕರ್ ಓಣಿ ನಂತರ ಬನ್ನಿಕಟ್ಟಿ, ಬಸವನಬೀದಿ ಮುಖಾಂತರ ಶಿವಾಜಿ ಸರ್ಕಲ್ ತಲುಪಿ ಕೆಲಹೊತ್ತು ಪ್ರತಿಭಟನಾಕಾರರು ಧರಣಿ ನಡೆಸಿದರು. ಈ ವೇಳೆ ಆರೋಪಿ ಇಸ್ಮಾಯಸಾಬ್ ನನ್ನು ಸ್ಥಳಕ್ಕೆ ಕರೆ ತಂದು ಎನ್ ಕೌಂಟರ್ ಮಾಡುವಂತೆ ಆಗ್ರಹಿಸಿ ಜನಾಕ್ರೋಶ ಮುಗಿಲು ಮುಟ್ಟಿತು. ಅಲ್ಲದೇ ಆರೋಪಿಯ ಮನೆ ನೆಲಸಮಗೊಳಿಸಿದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲಾಯಿತು. ಬಳಿಕ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ದೀಪನ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಎಸ್.ಪಿ ಮಾತನಾಡಿ, ಈ ಪ್ರಕರಣವನ್ನು ಅಗತ್ಯ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗೆ ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಟ್ಟಣದ ಎಲ್ಲ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ವಿಶೇಷವಾಗಿ ಮುಸ್ಲಿಂ ಬಾಂಧವರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಮುಕನ ವಿರುದ್ದ ಹೋರಾಟ ನಡೆಸಿದರು. ವಿವಿಧ ಹಿಂದು ಪರ ಸಂಘಟನೆಗಳು ಹಾಗೂ ಸರ್ವ ಪಕ್ಷದ ನಾಯಕರು ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಮತ್ತು ತಾಲೂಕಿನ ಸಾರ್ವಜನಿಕರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸಾರಿಗೆ ಸಂಸ್ಥೆ ಬಸ್ ಗಳು ಮುಂದೆ ಹೋಗಲಾಗದೆ ಅಲ್ಲಲ್ಲಿಯೇ ನಿಂತಿದ್ದವು.

ಪೊಲೀಸ ಬಿಗಿ ಬಂದೋಬಸ್ತ್: ಬಂದ್ ಹಾಗೂ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಾದ್ಯಂತ ಭಾರಿ ಬಿಗಿ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು.

ಶಾಸಕ ಶಿವರಾಮ ಹೆಬ್ಬಾರ ಮಾತು: ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದ್ದು, ಈ ಘಟನೆಯನ್ನು ಯಾರು ಕೂಡ ಸಹಿಸಲು ಸಾದ್ಯವಿಲ್ಲ. ಪೊಲೀಸ ಇಲಾಖೆಯಿಂದ ಎಷ್ಟು ಕಠಿಣ ಸೆಕ್ಷನ್ ಗಳಿವೆಯೊ ಅವುಗಳನ್ನು ಹಾಕಬೇಕು. ಅಲ್ಲದೇ ಆರೋಪಿಯ ಪರವಾಗಿ ಯಾವ ವಕೀಲರು ಕೂಡ ವಕಾಲತ್ತು ಮಾಡಬಾರದು. ಆ ವ್ಯಕ್ತಿ ಜೈಲಿನಲ್ಲಿಯೇ ನರಳಿ ನರಳಿ ಸಾಯಬೇಕು ಅದೇ ಅವನಿಗೆ ಶಿಕ್ಷೆಯಾಗಬೇಕು. ಸಮಾಜದಲ್ಲಿರುವ ದುಷ್ಟರಿಗೆ ಇದು ಪಾಠವಾಗಬೇಕು ಎಂದರು.

ಮಾಜಿ ಶಾಸಕ ವಿ.ಎಸ್ ಪಾಟೀಲ, ಮಾಜಿ ಜಿ.ಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ, ತಾಲೂಕಾ ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಬಜರಂಗದಳ ವಿಭಾಗ ಸಂಯೋಜಕ ಅಮಿತ ಶೇಟ್, ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ವಿನಾಯ ತಲಗೇರಿ ಹಿಂದುಜಾಗರಣ ವೇದಿಕೆ ಶ್ರೀಕಾಂತಜೀ, ಸುರೇಶ ಕುಲ್ಲಳ್ಳಿ ಮುಂತಾದವರರು ಮಾತನಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರು.