ಕ್ರೀಡೆ ಪ್ರತಿಯೊಬ್ಬರಲ್ಲಿಯೂ ವಿಶ್ವಾಸ ಮೂಡಿಸುವ ಸಾಧನ

| Published : Aug 24 2024, 01:33 AM IST

ಸಾರಾಂಶ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಶಿಸ್ತು, ಗುರಿ ಮತ್ತು ಶ್ರದ್ಧೆ ಮೈಗೂಡಿಸಿಕೊಳ್ಳುವ ಮೂಲಕ ಕಾರ್ಯಸಾಧನೆಗೆ ಅಡಿಗಲ್ಲಾಗಲಿದೆ

ಕನ್ನಡಪ್ರಭ ವಾರ್ತೆ ಹುಣಸೂರು

ಕ್ರೀಡೆ ಪ್ರತಿಯೊಬ್ಬರಲ್ಲಿಯೂ ವಿಶ್ವಾಸ ಮೂಡಿಸುವ ಸಾಧನವಾಗಿದ್ದು, ಅಚಲ ವಿಶ್ವಾಸದಿಂದ ಮಾತ್ರ ಸಾಧನೆ ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದು ಶಾಸಕ ಜಿ.ಡಿ. ಹರೀಶ್‌ ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಶಿಸ್ತು, ಗುರಿ ಮತ್ತು ಶ್ರದ್ಧೆ ಮೈಗೂಡಿಸಿಕೊಳ್ಳುವ ಮೂಲಕ ಕಾರ್ಯಸಾಧನೆಗೆ ಅಡಿಗಲ್ಲಾಗಲಿದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಅವಕಾಶವಿದೆ. ಈ ಕ್ಷೇತ್ರವನ್ನು ಕಡೆಗಾಣಿಸದೆ ಶ್ರದ್ಧೆಯಿಂದ ತೊಡಗಿಸಿಕೊಂಡು ಬಹುಮಾನಗಳಿಸುವುದರೊಂದಿಗೆ ಸ್ನೇಹ ಸಂಪಾದಿಸುವ ಕೆಲಸವೂ ನಿಮ್ಮಿಂದಾಗಬೇಕು ಎಂದರು.

ಕ್ರೀಡೆ ಪ್ರತಿಯೊಬ್ಬರಲ್ಲಿಯೂ ವಿಶ್ವಾಸ ಮೂಡಿಸುವ ಸಾಧನವಾಗಿದೆ. ವಿಶ್ವಾಸವಿಲ್ಲದೆ ಕ್ರೀಡೆಯಲ್ಲಿ ತೊಡಗಲು ಅಸಾಧ್ಯ. ನಿಮ್ಮ ದೈಹಿಕ ಶಕ್ತಿ ಮೇಲೆ ಮೊದಲು ನೀವು ವಿಶ್ವಾಸವಿಡಬೇಕು ನಂತರದಲ್ಲಿ ನಿಮ್ಮ ಸಹಕ್ರೀಡಾಪಟುಗಳ ಮೇಲೂ ವಿಶ್ವಾಸವಿರಬೇಕು. ವಿಶ್ವಾಸಾರ್ಹ ಕ್ಷೇತ್ರವನ್ನು ರೂಪಿಸಲು ವೇದಿಕೆ ಇದಾಗಲಿದೆ ಎಂದರು.

ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ಮಾತನಾಡಿ, ದೈಹಿಕ ಆರೋಗ್ಯದಿಂದ ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ. ಪ್ರತಿಯೊಬ್ಬರು ಕಾಲೇಜು ಶಿಕ್ಷಣದಲ್ಲಿ ಕ್ರೀಡೆಯೊಂದಿಗೆ ಪಠ್ಯ ಚಟುವಟಿಕೆಗೆ ಆದ್ಯತೆ ನೀಡುವುದು ಒಳ್ಳೆಯ ಬೆಳವಣಿಗೆ ಎಂದರು.

ಕ್ರೀಡಾಕೂಟದ ಆತಿಥ್ಯ ವಹಿಸಿದ್ದ ಶಾಸ್ತ್ರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿದರು.

ಕ್ರೀಡಾ ಜ್ಯೋತಿಯನ್ನು ಸಿಪಿಐ ಸಂತೋಷ್ ಕಶ್ಯಪ್ ಸ್ವೀಕರಿಸಿದರು. ತಾಲೂಕಿನ 20 ಕಾಲೇಜುಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಕೆ. ಹೊಂಗಯ್ಯ, ನಗರಸಭೆ ಆಯುಕ್ತೆ ಮಾನಸ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಶಾಸ್ತ್ರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ರವಿಶಂಕರ್, ವಿವಿಧ ಕಾಲೇಜು ಪ್ರಾಂಶುಪಾಲರು ಇದ್ದರು.