ನಗರಸಭೆ ಆಡಳಿತ ನಿಷ್ಕ್ರಿಯ: ಪ್ರತಿಭಟನೆಯ ಎಚ್ಚರಿಕೆ

| Published : Jun 11 2024, 01:38 AM IST

ನಗರಸಭೆ ಆಡಳಿತ ನಿಷ್ಕ್ರಿಯ: ಪ್ರತಿಭಟನೆಯ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೆ ಒಂದು ಮನೆ, ನಿವೇಶನಗಳ ಖಾತೆ, ಇ-ಖಾತೆ ಮಾಡದಿರುವುದರಿಂದ ಜನರು ಪರದಾಡುವಂತಾಗಿದ್ದು ಅವರ ಭವಣೆ ಹೇಳತೀರದ್ದಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕಳೆದೊಂದು ವರ್ಷದಿಂದ ತಾಲ್ಲೂಕಿ ಕಚೇರಿಯಲ್ಲಿ ಹಕ್ಕುಪತ್ರ ವಿತರಣೆ, ಖಾತೆ ಬದಲಾವಣೆ, ನಗರಸಭೆಯಲ್ಲಿ ಇ-ಖಾತೆ, ಖಾತೆಗಳು ನಡೆಯದೆ ಜನ ಪರದಾಡುತ್ತಿದ್ದು, ತಾಲ್ಲೂಕು ಕಚೇರಿ ಅಧಿಕಾರಿಗಳ ಹಾಗೂ ನಗರಸಭೆ ಅಧಿಕಾರಿಗಳು ಈ ಸಮಸ್ಯೆಯನ್ನು ೧೫ ದಿನಗಳ ಒಳಗಾಗಿ ಸರಿಪಡಿಸದಿದ್ದರೆ, ನಗರಸಭೆ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ತಾಲೂಕು ಕೆ.ರಾಗುಟ್ಟಹಳ್ಳಿಯಲ್ಲಿ ವೆಂಕಟರತ್ನಮ್ಮ – ವಿ.ಜಯರಾಮಪ್ಪ ಆರ್.ಎಂ.ಜೆ ಕುಟುಂಬದವರಿಂದ ಹಮ್ಮಿಕೊಂಡಿದ್ದ ಅಶ್ವತ್ಥ ನಾರಾಯಣಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.ನಗರಸಭೆಯಲ್ಲಿ ಖಾತೆ ಮಾಡುತ್ತಿಲ್ಲ

ನಗರಸಭೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೆ ಒಂದು ಮನೆ, ನಿವೇಶನಗಳ ಖಾತೆ, ಇ-ಖಾತೆ ಮಾಡದಿರುವುದರಿಂದ ಜನರು ಪರದಾಡುವಂತಾಗಿದ್ದು ಅವರ ಭವಣೆ ಹೇಳತೀರದ್ದಾಗಿದೆ. ಅವಿಭಜಿತ ಕೋಲಾರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ಹಾಗೂ ನಗರಸಭೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಹಾಗೂ ಖಾತೆ ಬದಲಾವಣೆ ಆಗುತ್ತಿರುವ ಕೆಲಸ ಕಾರ್ಯಗಳು ಚಿಂತಾಮಣಿ ತಾಲ್ಲೂಕಿನಲ್ಲಿ ಮಾತ್ರ ಆಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಆದರೆ ನಗರಸಭೆಯ ಅಧಿಕಾರಿಗಳು ಯಾವುದೇ ಖಾತೆಗಳನ್ನು ಮಾಡದಿರುವುದರಿಂದ ಅವರ ದೈನಂದಿನ ವ್ಯವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡು ಅಧಿಕಾರಿಗಳ ಬೇಜವ್ದಾರಿ ನಿರ್ಲಕ್ಷ್ಯದಿಂದ ಜನತೆ ಪರದಾಟುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕು ಕಚೇರಿಯಲ್ಲಿ ಸಾಗುವಳಿ ಚೀಟಿ ವಿತರಣೆಯಾಗುತ್ತಿಲ್ಲ, ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ ಎಂದರು.

ನೋಂದಣಿ ಶುಲ್ಕ ಭಾರಿ ಹೆಚ್ಚಳ

ರಾಜ್ಯ ಸರ್ಕಾರವು ನೋಂದಣಿ ಶುಲ್ಕವನ್ನು ಶೇ ೩೦ರಷ್ಟು ಏರಿಕೆ ಮಾಡುವಂತೆ ಸೂಚಿಸಿದ್ದರೆ ಕೆಲವೆಡೆ ನೋಂದಣಿ ದರವನ್ನು ಶೇ ೧೦೦, ೨೦೦, ೩೦೦ರಷ್ಟು ಏರಿಕೆ ಮಾಡಿದ್ದು ಈ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ನಾವು ಸಂಗ್ರಹಿಸಿದ್ದೇವೆ ಅಗತ್ಯವಾದರೂ ಅದನ್ನು ನೀಡಲು ಸಿದ್ಧರಿದ್ದೇವೆಂದರು. ಈ ಕ್ಷೇತ್ರ ಶಾಸಕರು ಸಚಿವರಾಗಿರುವುದರಿಂದ ಸಂಪುಟ ಸಭೆಯಲ್ಲಿ ಸರ್ಕಾರದ ಗಮನ ಸೆಳೆದು ಜನಸಾಮಾನ್ಯರಿಗೆ ಹೊರೆಯಾಗದಂತೆ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವರು ಕಾರ್ಯೋನ್ಮುಖರಾಗಬೇಕೆಂದು ಕೋರಿದರು. ವಿಶೇಷವಾಗಿ ನಗರಸಭೆಯಲ್ಲಿ ಖಾತೆಗಳನ್ನು ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದ ಜೆ.ಕೆ. ಕೃಷ್ಣಾರೆಡಿ ಒಂದೊಮ್ಮೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇನ್ನು ೧೫ ದಿನಗಳಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಚಿವರ ವಿರುದ್ದ ನಗರಸಭೆ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೆ. ರಾಗುಟ್ಟಹಳ್ಳಿ ನಾರಾಯಣಸ್ವಾಮಿ, ಜಯರಾಮಪ್ಪ, ಶಿವರಾಜ್, ಸುಬ್ರಮಣಿ, ಮಾಜಿ ನಗರಸಭಾ ಸದಸ್ಯ ಸಿ.ಎನ್.ವೆಂಕಟೇಶ್, ನಗರಸಭಾ ಸದಸ್ಯ ದೇವಳಂ ಶಂಕರ್, ಕೆ.ವಿ ಶ್ರೀನಿವಾಸರೆಡ್ಡಿ, ಜೆಕೆ ಮಧು, ಕೊತ್ತೂರು ಬಾಬು, ವೀರಪ್ಪಲ್ಲಿ ಶಂಕರ, ಕೋಟಗಲ್ ಮೊದಲೇಟಿ ನರಸಿಂಹಪ್ಪ, ನರಸಾಪುರ ಪಟೇಲ್ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.