ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ನೌಕರ ವರ್ಗದವರ ಕರ್ತವ್ಯದಲ್ಲಿ ಸರ್ಕಾರ ರೂಪಿಸಿರುವ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಕೆ.ಆರ್.ನಂದಿನಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.ಪಂಚಾಯಿತಿ ಪಿಡಿಓಗಳಿಗೆ ಸರ್ಕಾರ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ನೀಡಿ ಬಳಕೆಗೆ ನಿರ್ದೇಶಿಸಿದ್ದರೂ ಅದನ್ನು ಬಳಕೆ ಮಾಡದಿರುವುದು, ಕಚೇರಿ ಅವಧಿಯಲ್ಲಿ ಚಾಲನೆಯಲ್ಲಿ ಇಡದಿರುವುದು, ಖಾಸಗಿ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದರಿಂದ ಪಿಡಿಓಗಳು ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಅಹವಾಲುಗಳಿಗೆ ಸ್ಪಂದಿಸದಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.ಪಂಚಾಯಿತಿಯ ಪಿಡಿಓ ಮತ್ತು ಇತರ ನೌಕರರು ಸರ್ಕಾರದ ಕಚೇರಿ ಆರಂಭದ ಸಮಯ 10 ಗಂಟೆಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವುದು. ಕಚೇರಿ ಅವಧಿ ಮುಗಿಯುವವರೆಗೆ ನಿಗದಿಪಡಿಸಿದ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಬೇಕು. ಅನ್ಯ ಕರ್ತವ್ಯದ ಮೇರೆಗೆ ತೆರಳಬೇಕಾದಲ್ಲಿ ಕಚೇರಿ ಚಲನ-ವಲನ ವಹಿಯಲ್ಲಿ ಕಡ್ಡಾಯವಾಗಿ ಸಕಾರಣ ನಮೂದಿಸಿ ಮೇಲಧಿಕಾರಿಗಳ ಅನುಮತಿ ಪಡೆದು ತೆರಳುವುದು. ನಿಯಮಗಳನ್ನು ಅನುಸರಿಸದ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಜಿಪಂ, ತಾಪಂಗಳಲ್ಲಿ ಕರೆಯುವ ಸಭೆಗಳಿಗೆ ಹಾಜರಾಗಬೇಕಾದರೆ ಅಥವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಕ್ಷೇತ್ರ/ಸ್ಥಳ ಭೇಟಿ ನೀಡಲು ತೆರಳಿದಲ್ಲಿ ಭೇಟಿಯ ಉದ್ದೇಶ, ಸ್ಥಳ ಮತ್ತು ಇತರೆ ಮಾಹಿತಿಯನ್ನು ಚಲನ-ವಲನ ವಹಿಯಲ್ಲಿ ದಾಖಲಿಸಿ ಮೇಲಧಿಕಾರಿಗಳ ಅನುಮತಿ ಪಡೆದು ಹೊರಗೆ ತೆರಳುವುದು. ತಾಪಂಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ನೇಮಕ ಮಾಡಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಗ್ರಾಪಂಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದ್ದಾರೆ.ಪ್ರತಿ ಮಾಹೆ ಬಯೋಮೆಟ್ರಿಕ್ ಹಾಜರಾತಿ ಮಾಹಿತಿ ಪರಿಶೀಲಿಸಿ ವೇತನ ಪಾವತಿಸುವುದು. ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕಡ್ಡಾಯವಾಗಿ ಸಮವಸ್ತ್ರ ಧರಿಸುವುದು ಊಟದ ಸಮಯ ಪಾಲನೆಯನ್ನು ಕಟ್ಟುನ್ಟಿಾಗಿ ಪಾಲಿಸುವುದು. ತಾಪಂ ಮತ್ತು ಗ್ರಾಪಂ ಕಚೇರಿಗಳಲ್ಲಿ ಕಡ್ಡಾಯವಾಗಿ ಸೀಸಿ ಕ್ಯಾಮರಾ ಚಾಲನೆಯಲ್ಲಿರುವಂತೆ ನೋಡಿಕೊಳ್ಳುವುದೂ ಸೇರಿದಂತೆ ಇತರೆ ನಿಯಮಗಳನ್ನು ಅನುಸರಿಸುವಂತೆ ಕಡ್ಡಾಯವಾಗಿ ತಿಳಿಸಿದ್ದಾರೆ.ಸರ್ಕಾರಿ ಕಚೇರಿಯ ಕಾರ್ಯವಿಧಾನಗಳನ್ನು ಅನುಸರಿಸಲು ವಿಫಲರಾದ ಅಧಿಕಾರಿಗಳು, ನೌಕರರ ವಿರುದ್ಧ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳನ್ವಯ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮಕ್ಕೆ ಒಳಡಿಸುವುದಾಗಿ ಎಚ್ಚರಿಸಿದ್ದಾರೆ.ಕೋಟ್---------ಸುತ್ತೋಲೆ ಹೊರಡಿಸುವುದರಿಂದ ಪ್ರಯೋಜನವಿಲ್ಲ. ತಾಪಂ, ಗ್ರಾಪಂಗಳಿಗೆ ಸಿಇಓ ಅವರು ದಿಢೀರ್ ಭೇಟಿ ನೀಡಿದಾಗ ಮಾತ್ರ ಕಚೇರಿಯ ಕಾರ್ಯವಿಧಾನಗಳು ಎಷ್ಟರಮಟ್ಟಿಗೆ ಜಾರಿಯಾಗಿವೆ ಎಂದು ತಿಳಿಯಲು ಸಾಧ್ಯ. ಎಷ್ಟೋ ಪಂಚಾಯಿತಿಗಳಲ್ಲಿ ಡಿ-ಗ್ರೂಪ್ ನೌಕರರನ್ನು ಬಿಟ್ಟರೆ ಯಾರೂ ಕಚೇರಿಯಲ್ಲೇ ಇರುವುದಿಲ್ಲ. ಕಚೇರಿ ಅವಧಿ ಮುಗಿಯುವುದಕ್ಕೆ ಮುಂಚಿತವಾಗಿ ಬಾಗಿಲು ಮುಚ್ಚಿರುತ್ತದೆ.- ಕೆ.ಸುರೇಂದ್ರ, ಸದಸ್ಯರು, ಹಲಗೂರು ಗ್ರಾಪಂ