ಸಾರಾಂಶ
ಎಸ್.ಎಂ. ಸೈಯದ್ ಗಜೇಂದ್ರಗಡ
ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟ ಪರಿಣಾಮ ಕೊನೆಯ ೧೫ ತಿಂಗಳ ಅವಧಿಗೆ ಆಯ್ಕೆಯಾಗಿರುವ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮುಂದೆ ಸಾಲು, ಸಾಲು ಸಮಸ್ಯೆಗಳಿವೆ. ಅಭಿವೃದ್ಧಿ ಜತೆಗೆ ಸಮಸ್ಯೆ ಪರಿಹಾರಕ್ಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸವಾಲುಗಳಿವೆ.ಪಟ್ಟಣದ ಪುರಸಭೆಯ ೨೩ ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ೧೮ ಸದಸ್ಯರು ಹಾಗೂ ೫ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರಿಂದ ಚುನಾವಣೆಯ ದಿನದ ವರೆಗೂ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬ ಲೆಕ್ಕಾಚಾರಗಳಿದ್ದವು. ಆದರೆ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಪೋಟಿಯಿಂದ ಬಂಡಾಯವೆದ್ದ ಸುಭಾಸ ಮ್ಯಾಗೇರಿ ಜತೆಗೆ ೬ ಬಿಜೆಪಿ ಸದಸ್ಯರು ಸೇರಿದರು. ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್ ಪುರಸಭೆಯಲ್ಲಿ ಮೇಲುಗೈ ಸಾಧಿಸಿತು.
ಬೀದಿದನ, ನಾಯಿಗಳ ಹಾವಳಿ:ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿದನ ಹಾಗೂ ಬೀದಿನಾಯಿಗಳ ಹಾವಳಿಯಿಂದ ವಾಹನ ಸಂಚಾರ ಕಷ್ಟವಾಗಿದೆ. ಸಾರ್ವಜನಿಕರು ಭಯದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಬೀದಿ ದನ, ನಾಯಿಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಕೆಲವು ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ.
ಪಟ್ಟಣದ ಪ್ರಮುಖ ರಸ್ತೆಗಳು, ಕೆಲವು ವಾರ್ಡ್ ರಸ್ತೆಗಳು ತೀರಾ ಹದಗೆಟ್ಟಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ. ಅದಕ್ಕೆ ಕಡಿವಾಣ ಬೀಳಬೇಕಿದೆ. ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ. ಶೌಚಾಲಯಗಳ ಸೂಕ್ತ ನಿರ್ವಹಣೆಯಾಗಬೇಕಿದೆ. ಜತೆಗೆ ಮನೆ, ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕಿದೆ. ಪಟ್ಟಣದ ರಸ್ತೆ, ಹೊಟೇಲ್ ಸ್ವಚ್ಛತೆ ಹಾಗೂ ಟೇಸ್ಟಿಂಗ್ ಪೌಡರ್ ಮಾರಾಟಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ವ್ಯಾಪಾರಸ್ಥರ ಪರವಾನಗಿ ಮತ್ತು ನವೀಕರಣ ಮೂಲಕ ತೆರಿಗೆ ವಸೂಲಿಗೂ ಪ್ರಾಮುಖ್ಯತೆ ನೀಡುವುದು ಅವಶ್ಯಕವಾಗಿದೆ. ನೂತನ ಅಧ್ಯಕ್ಷ-ಉಪಾಧ್ಯಕ್ಷರು ಪರಿಹಾರ ಕಂಡುಕೊಳ್ಳಲು ಸದಸ್ಯರ, ಅಧಿಕಾರಿಗಳ ವಿಶ್ವಾಸ ಪಡೆಯುವುದು ಮುಖ್ಯವಾಗಿದೆ.ತರಕಾರಿ ಮಾರುಕಟ್ಟೆ: ಪಟ್ಟಣದ ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರ ಹಾಗೂ ತರಕಾರಿ, ಹೂ, ಹಣ್ಣು ಮಾರಾಟಗಾರರಿಗೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ನಿರ್ಬಂಧ ಹೇರಿದ ಪರಿಣಾಮ ಬೀದಿ ಬದಿ ವ್ಯಾಪಾರಸ್ಥರು ಸದ್ಯ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಆದರೆ ವ್ಯಾಪಾರಿಗಳಿಗೆ ಕನಿಷ್ಠ ಸೌಲಭ್ಯ ಸಹ ಸಿಗುತ್ತಿಲ್ಲ. ಪರಿಣಾಮ ಮಳೆ, ಗಾಳಿ ಬಂದರೆ ಅವರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ನೆರವಿಗೆ ಸವಾಲು: ಗಜೇಂದ್ರಗಡ ಪಟ್ಟಣವನ್ನು ಗುಡಿಸಲು ಮುಕ್ತವಾಗಿಸಲು ನೂರಾರು ಮನೆಗಳ ನಿರ್ಮಾಣವಾಗಬೇಕಿದೆ. ಕೊಳಚೆ ನಿಮೂರ್ಲನಾ ಮಂಡಳಿ ಹಾಗೂ ವಿವಿಧ ನಿಗಮಗಳಿಂದ ನಿರ್ಮಿಸುತ್ತಿರುವ ಮನೆಗಳಿಗೆ ಸಕಾಲದಲ್ಲಿ ಹಣ ಬಿಡುಗಡೆಯಾಗಬೇಕಿದೆ. ಆಯ್ಕೆಯಾಗಿರುವ ಕೆಲವು ಫಲಾನುಭವಿಗಳಿಗೆ ಅನುದಾನ ಬಿಡುಗಡೆ, ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಾಗಬೇಕಿದೆ.