ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿವೇಶನದಲ್ಲಿ ಕಸ, ಗಿಡಗಂಟೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಸಾರ್ವಜನಿಕರಿಗೆ ತಿಳಿಸಿದ್ದಾರೆ.ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ಸೊಳ್ಳೆ, ಹಾವುಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಖಾಲಿ ನಿವೇಶನಗಳನ್ನು ನೀವೇ ಸ್ವಚ್ಛಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ಕಂದಾಯದಲ್ಲಿ ಸೇರಿಸಿ ವಸೂಲಿ ಮಾಡಲಾಗುವುದು. ನಗರಸಭೆ ಕಾಯಿದೆ ೧೯೬೪ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿರುಗಾಳಿ ಮಳೆಗೆ ಹಾರಿದ ಛಾವಣಿಶ್ರೀರಂಗಪಟ್ಟಣ:ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಛಾವಣಿ ಹಾರಿ ಹೋಗಿರುವ ಘಟನೆ ಚಂದಗಿರಿಕೊಪ್ಪಲಿನಲ್ಲಿ ನಡೆದಿದೆ.ತಾಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದಗಿರಿಕೊಪ್ಪಲು ಗ್ರಾಮದ ಲೇ.ಜವರೇಗೌಡರ ಪತ್ನಿ ಬಿ.ಟಿ.ವಿಜಯರಿಗೆ ಸೇರಿದ ಮನೆ ಛಾವಣಿ ಸಂಪೂರ್ಣ ಹಾರಿ ಹೋಗಿ ಮನೆಯೊಳಗೆ ಮಳೆ ನೀರು ತುಂಬಿಕೊಂಡಿದೆ.
ಮನೆಯಲ್ಲಿದ್ದವರು ಬಿಸಿದ ಬಿರುಗಾಳಿ ಸಹಿತ ಗುಡುಗು ಮಳೆಗೆ ದೊಡ್ಡದಾಗಿ ಶಬ್ದ ಬಂದು ಛಾವಣಿ ಹಾರಿ ಹೋಗಿದೆ. ಶಬ್ದಕ್ಕೆ ಗಾಬರಿಗೊಂಡು ಮನೆಯವರು ಹೊರಗೆ ಬಂದಿದ್ದಾರೆ. ಸದ್ಯ ಯಾರಿಗೂ ಅಪಾಯವಾಗಿಲ್ಲ. ತಾಲೂಕು ಆಡಳಿತ ಹಾಗೂ ಗ್ರಾಪಂ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡುವಂತೆ ಬಿ.ಟಿ.ವಿಜಯ ಒತ್ತಾಯಿಸಿದ್ದಾರೆ.