ಹುಬ್ಬಳ್ಳಿ: ಬಹುಪಯೋಗಿ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ದೊಡ್ಡ ಮೊತ್ತದ ಹಣ ಅಗತ್ಯ. ಈ ನಿಟ್ಟಿನಲ್ಲಿ "ಮುನ್ಸಿಪಲ್‌ ಬಾಂಡ್‌ " ಮೂಲಕ ಸಾಲ ಪಡೆಯಲು ಹು- ಧಾ ಮಹಾನಗರ ಪಾಲಿಕೆ ಆಸಕ್ತಿ ತೋರಿಸಿದ್ದು, ಬಾಂಡ್‌ ಸಾಲದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ವಿಶೇಷ ಸಾಮಾನ್ಯಸಭೆ ನಡೆಸಲು ನಿರ್ಧರಿಸಿದೆ.

ಮುನ್ಸಿಪಲ್‌ ಬಾಂಡ್‌ ಸಂಬಂಧಪಟ್ಟಂತೆ ಸೋಮವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪಾಲಿಕೆ ಸದಸ್ಯರಿಗಾಗಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಈ ಆಸಕ್ತಿ ಕಂಡು ಬಂತು. ಪಾಲಿಕೆ ಸದಸ್ಯರು ಕಾರ್ಯಾಗಾರದಲ್ಲಿ ತಮ್ಮ ಅನುಮಾನಗಳಿಗೆ ಪರಿಹಾರ ಕಂಡುಕೊಂಡರು. ಅಲ್ಲದೇ, ಹೊರೆಯಾಗದಂತೆ ಸಾಲ ಪಡೆಯಲು ಬಾಂಡ್‌ ಎಷ್ಟರ ಮಟ್ಟಿಗೆ ಸಹಕಾರಿ ಆಗುತ್ತದೆ ಎಂಬ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಸಿದರು. ಬಳಿಕ ಬಾಂಡ್ ಸಾಲ ಬಗ್ಗೆ ಸಮಗ್ರವಾಗಿ ಚರ್ಚಿಸಿ ತೀರ್ಮಾನಿಸಲು ವಿಶೇಷ ಸಾಮಾನ್ಯ ಸಭೆ ಕರೆಯಲು ನಿರ್ಧರಿಸಿದರು.

ಪಾಲಿಕೆಯದ್ದೇ ಜವಾಬ್ದಾರಿ ಇರಲಿ

ಯೋಜನೆ ರೂಪಿಸಿ, ಟೆಂಡರ್ ಕರೆಯುವ ಮತ್ತು ಅನುಷ್ಠಾನದ ಎಲ್ಲ ಹಂತಗಳಲ್ಲಿ ಪಾಲಿಕೆಯದ್ದೇ ಜವಾಬ್ದಾರಿ ಆಗಿದ್ದರೆ ಬಾಂಡ್ ಸಾಲ ಪಡೆದರೆ ಅನುಕೂಲವಾಗುತ್ತದೆ. ಮೂರನೆಯವರಿಗೆ ಅನುಕೂಲ ಮಾಡಿಕೊಡುವಂಥ ಯಾವುದೇ ನಿರ್ಧಾರಗಳನ್ನು ರಾಜ್ಯ, ಕೇಂದ್ರ ಸರ್ಕಾರಗಳು ಕೈಗೊಳ್ಳುವಂತಾಗಬಾರದು ಎಂದು ಸದಸ್ಯರು ಪಕ್ಷಾತೀತವಾಗಿ ಅಭಿಪ್ರಾಯಿಸಿದರು.


ಈಗಾಗಲೇ ನಿರಂತರ ಯೋಜನೆಯಡಿ ಸಾಲದ ಹೊಣೆಗಾರಿಕೆ ಪಾಲಿಕೆ ಮೇಲಿದೆ. ಆದರೆ, ನೋಡಲ್ ಏಜೆನ್ಸಿಯಾದ ಕೆಯುಐಡಿಎಫ್‌ಸಿ ಒಟ್ಟು ಯೋಜನಾ ವೆಚ್ಚದ ಮೇಲೆ ಶೇ. 8ರಷ್ಟು ಸೇವಾ ಶುಲ್ಕ ಪಡೆಯುತ್ತಿದೆ. ಇದರ ಮೇಲೆ ಇತರ ಖರ್ಚು-ವೆಚ್ಚ ಪಾಲಿಕೆಯೇ ಭರಿಸುತ್ತಿದೆ. ಮುನ್ಸಿಪಲ್ ಬಾಂಡ್ ಪ್ರಾಜೆಕ್ಟ್‌ನಲ್ಲೂ ಹೀಗೆ ಆಗಬಾರದು ಎಂದು ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ಆಗ್ರಹಿಸಿದರು. ಇದಕ್ಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಧ್ವನಿಗೂಡಿಸಿದರು.ಸಾಮಾನ್ಯ ಸಭೆಯೇ ಅಂತಿಮ

ಪಾಲಿಕೆ ಕಮಿಷನರ್ ಡಾ.ರುದ್ರೇಶ ಘಾಳಿ ಮಾತನಾಡಿ, ಬಾಂಡ್ ಸಾಲದ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯದ್ದೇ ಅಂತಿಮ ನಿರ್ಧಾರ. ಯೋಜನೆಗಳ ವಿಚಾರದಲ್ಲಿ ಪ್ರತಿ ಹಂತದಲ್ಲೂ ಪಾಲಿಕೆಯೇ ಜವಾಬ್ದಾರಿಯಾಗಿರುತ್ತದೆ. ಸರಕಾರಗಳು ಗ್ಯಾರಂಟಿ ನೀಡುತ್ತವೆ. ಅಲ್ಲದೇ ಕೇಂದ್ರ ಸರಕಾರ ₹100 ಕೋಟಿಗೆ ₹13 ಕೋಟಿ ಪ್ರೋತ್ಸಾಹಧನ ಕೊಡುತ್ತದೆ. ಮುನ್ಸಿಪಲ್ ಬಾಂಡ್ ಸಾಲವು ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ ಕೈಗೆತ್ತಕೊಳ್ಳಲು ನೆರವಾಗುತ್ತದೆ. ಇದರಿಂದ ಪಾಲಿಕೆಗೆ ಹೊರೆ ಎನ್ನುವುದಕ್ಕಿಂತ ಕರದಾತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಎ.ಕೆ. ಕ್ಯಾಪಿಟಲ್ ಸರ್ವಿಸಸ್ ಲಿಮಿಟೆಡ್‌ನ ಚಂದ್ರಶೇಖರ ಮಾತನಾಡಿ, ಮುನ್ಸಿಪಲ್ ಬಾಂಡ್ ಎಂಬುದು ಸಾಲ ಪಡೆಯುವ ಹೊಸ ಉಪಕ್ರಮ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಬೃಹತ್ ಮೊತ್ತದ ಸಾಲ ನೀಡಲು ನೇರವಾಗಿ ಮುಂದೆ ಬರುವುದಿಲ್ಲ. ಹಾಗಾಗಿ, ದೊಡ್ಡ ಪ್ರಾಜೆಕ್ಟ್‌ಗಳ ಜಾರಿಗೆ ಮುನ್ಸಿಪಲ್ ಬಾಂಡ್ ಬಿಟ್ಟು ಬೇರೆ ಮಾರ್ಗವಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆದಾರರು ಸಾಲ (ಬಂಡವಾಳ) ನೀಡುವರು ಎಂದರು.

ಆನ್‌ಲೈನ್ ಮೂಲಕ ಮಾತನಾಡಿದ ಕೇರ್ ಎಡ್ಜ್ ಸಂಸ್ಥೆಯ ಡಾ. ಕೇದಾರ ದೇಶಪಾಂಡೆ, ಬಾಂಡ್ ಸಾಲಗಳನ್ನು ವಿಶೇಷವಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಯೋಜನೆಗಳಿಗೆ ನೀಡಲಾಗುತ್ತದೆ ಎಂದರು.

ಕ್ಲೈಮೇಟ್ ಬಾಂಡ್ಸ್ ಇನಿಶಿಯೇಟಿವ್‌ನ ದಕ್ಷಿಣ ಏಷ್ಯಾ ಮುಖ್ಯಸ್ಥೆ ನೇಹಾ ಕುಮಾರ ಅವರು ಕ್ಲೈಮೇಟ್ ಬಾಂಡ್ ಕುರಿತು ಮಾಹಿತಿ ನೀಡಿದರು. ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ, ಸೇರಿದಂತೆ ಪಾಲಿಕೆ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು

ಹೊರೆಯಾಗಲ್ಲ ಚಿಂತೆ ಬಿಡಿ

ಮುನ್ಸಿಪಲ್‌ ಬಾಂಡ್‌ಗಳು ಪಾಲಿಕೆಗೆ ಹೊರೆಯಾಗಲ್ಲ. ಮುನ್ಸಿಪಲ್ ಬಾಂಡ್‌ಗಳ ಮೂಲಕ ಸಂಗ್ರಹಿಸಲಾಗುವ ಬಂಡವಾಳಕ್ಕೆ ಹೂಡಿಕೆದಾರರಿಗೆ ನಗರ ಸ್ಥಳೀಯ ಸಂಸ್ಥೆಗಳು ನಿರ್ದಿಷ್ಟ ವಾರ್ಷಿಕ ಬಡ್ಡಿ ಪಾವತಿಸಬೇಕಾಗುತ್ತದೆ. ಆದರೆ, ಕೇಂದ್ರ ಸರಕಾರ ₹100 ಕೋಟಿ ಬಂಡವಾಳಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ₹13 ಕೋಟಿ (ಗ್ರೀನ್ ಬಾಂಡ್‌ಗೆ ₹10 ಕೋಟಿ) ಪ್ರೋತ್ಸಾಹ ಧನ ನೀಡುತ್ತದೆ ಎಂದು ಪವರ್‌ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷೆ ಸುಜಾತಾ ಶ್ರೀಕುಮಾರ್ ವಿವರಿಸಿದರು.

1998ರಲ್ಲಿ ಮೊದಲ ಬಾರಿಗೆ ಅಹಮದಾಬಾದ್ ಮಹಾನಗರ ಪಾಲಿಕೆ ನೀರು ಪೂರೈಕೆ ಯೋಜನೆಗೆ ಮುನ್ಸಿಪಲ್ ಬಾಂಡ್ ಮೂಲಕ ಬಂಡವಾಳ ಕ್ರೋಢೀಕರಿಸಿತ್ತು. 2005ರಲ್ಲಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸಿದೆ. ಅಲ್ಲಿಂದ ಈ ವರೆಗೆ ಲಕ್ನೋ, ಗಾಜಿಯಾಬಾದ್, ಸೂರತ್, ವಡೋದರಾ ಸೇರಿದಂತೆ 32 ಸ್ಥಳೀಯ ಸಂಸ್ಥೆಗಳು ಮುನ್ಸಿಪಲ್ ಬಾಂಡ್ ಮೂಲಕ ಹಲವು ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿವೆ ಎಂದರು.

ಪ್ರಾಜೆಕ್ಟ್‌ಗಳ ಅನುಷ್ಠಾನಕ್ಕೆ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸುವ ಉದ್ದೇಶದ ಮುನ್ಸಿಪಲ್ ಬಾಂಡ್‌ಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರೆಯಾಗುವುದಿಲ್ಲ. ನಗರಕ್ಕೆ ಸೂಕ್ತವಾದ ಹಾಗೂ ದೂರದೃಷ್ಟಿಯ ಪ್ರಾಜೆಕ್ಟ್‌ ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.