ಡಿಸಿ ಕಾಲೋನಿ ಸ್ವಚ್ಛತೆಗೆ ಚಾಲನೆ ಕೊಟ್ಟ ನಗರಸಭೆ

| Published : Dec 20 2024, 12:49 AM IST

ಸಾರಾಂಶ

Municipal Corporation launches DC Colony cleanup drive

-ಕನ್ನಡಪ್ರಭ ವರದಿಗೆ ಎಚ್ಚೆತ್ತ ನಗರಸಭೆ ಸಿಬ್ಬಂದಿ ಡಿಸಿ ಕಾಲೋನಿಯ ಸ್ವಚ್ಛತೆ ಕಾರ್ಯ ಮುಂದಾದರು

-----

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ 28 ನೇ ವಾರ್ಡಿನ ಡಿಸಿ ಕಾಲೋನಿಯ ರಸ್ತೆ ಮತ್ತು ಚರಂಡಿಯ ಅವ್ಯವಸ್ಥೆ ಬಗ್ಗೆ ಕನ್ನಡಪ್ರಭ ಪತ್ರಿಕೆಯು ಡಿ.19 ರಂದು ಪ್ರಕಟಿಸಿದ ನಗರಸಭೆ ಉಪಾಧ್ಯಕ್ಷರ ವಾರ್ಡಲ್ಲೇ ಇಲ್ಲ ರಸ್ತೆ ಚರಂಡಿ ಎಂಬ ವರದಿಗೆ ಎಚ್ಚೆತ್ತ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಗುರುವಾರ ಡಿಸಿ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛತೆ ಕಾಮಗಾರಿಗೆ ಚಾಲನೆ ನೀಡಿದರು. ಸುಮಾರು 280 ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಚರಂಡಿ ಇಲ್ಲದ್ದು ಆ ಭಾಗದ ಜನರು ಪದೇ ಪದೇ ಮನವಿ ಸಲ್ಲಿಸಿ ನಿರಾಶರಾಗುತ್ತಿದ್ದರು. ಆದರೆ, ಗುರುವಾರ ಡಿಸಿ ಕಾಲೋನಿಗೆ ಭೇಟಿ ನೀಡಿದ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪೌರಾಯುಕ್ತರು ಸಮಸ್ಯೆಯನ್ನು ಸ್ವತಃ ಪರಿಶೀಲನೆ ನಡೆಸಿ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ಕುರಿತು ಪೌರಾಯುಕ್ತರು ಪ್ರತಿಕ್ರಿಯಿಸಿ ನಗರದ 28 ನೇ ವಾರ್ಡಿನ ಡಿಸಿ ಕಾಲೋನಿಗೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ತೆರಳಿ ಅಲ್ಲಿನ ಸಮಸ್ಯೆ ಬಗ್ಗೆ ತಿಳಿದು ಸ್ವಚ್ಛತೆ ಆರಂಭಿಸಲಾಯಿತು. ಈ ವಾರ್ಡ್ ನಲ್ಲಿ ಬಹಳಷ್ಟು ತೆರೆದ ಖಾಲಿ ನಿವೇಶನಗಳಿವೆ. ಕೊಳಚೆ, ಚರಂಡಿ ಸ್ವಚ್ಛತೆ, ಗಿಡಗಂಟಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಅನುದಾನದ ಲಭ್ಯತೆ ಮೇಲೆ ರಸ್ತೆ ಚರಂಡಿಗಳನ್ನು ನಿರ್ಮಾಣ ಮಾಡಲಾಗುವುದು. ಈ ಮೂಲಕ 28 ನೇ ವಾರ್ಡಿನ ಡಿಸಿ ಕಾಲೋನಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಸ್ಥಳೀಯ ನಿವಾಸಿ ಕೆ ರಾಮಚಂದ್ರ ಮಾತನಾಡಿ, ಬುಧವಾರ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ನಗರದ ವಾರ್ಡ್ ನಂಬರ್ 28 ರ ಡಿಸಿ ಕಾಲೋನಿಯಲ್ಲಿ ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆ ಇಲ್ಲದೆ ಇರುವುದರ ಬಗ್ಗೆ ಮನವಿ ಮಾಡಿದಾಗ ಪತ್ರಿಕೆಯವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಪ್ರಕಟ ಮಾಡಿದ್ದರು. ಪತ್ರಿಕೆಯಲ್ಲಿ ಬಂದಂತ ಸುದ್ದಿಗೆ ಆದ್ಯತೆ ನೀಡಿದ ನಗರಸಭೆ ಪೌರಾಯುಕ್ತರು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ, ಚಿಕ್ಕ ದೇವಸ್ಥಾನದ ಹಿಂಭಾಗದ ಚರಂಡಿಯನ್ನು ಮತ್ತು ಸ್ವಲ್ಪ ಗಿಡಗಳನ್ನು ಜೆಸಿಬಿಯಿಂದ ಸ್ವಚ್ಛಗೊಳಿಸಿದ್ದಾರೆ. ಆದ್ದರಿಂದ, ಪತ್ರಿಕಾ ಮಾಧ್ಯಮದವರಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಡಿಸಿ ಕಾಲೋನಿಯ ಎಲ್ಲಾ ಗ್ರಾಮಸ್ಥರಿಂದ ಧನ್ಯವಾದ ಅರ್ಪಿಸುತ್ತೇವೆ ಎಂದರು.

-----

ಫೋಟೊ: ಕನ್ನಡಪ್ರಭ ವರದಿಗೆ ಎಚ್ಚೆತ್ತ ನಗರಸಭೆಯವರು ಗುರುವಾರ ಡಿಸಿ ಕಾಲೋನಿಯ ಸ್ವಚ್ಛತೆ ಕಾರ್ಯ ಆರಂಭಿಸಿದರು.