ಸಾರಾಂಶ
ನಾಲ್ಕೇರಿ ಊರು ಮಂದ್ ಕಳೆದ ಐದು ವರ್ಷದಿಂದ ಪುನರಾರಂಭವಾಗಿದ್ದು ಇದೀಗ ಮಂದ್‌ಗೆ ವರ್ಷದಿಂದ ವರ್ಷಕ್ಕೆ ಜೀವ ಕಳೆ ಹೆಚ್ಚಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕಳೆದ ಐದು ದಶಕಗಳಿಂದ ನಿಂತು ಹೋಗಿದ್ದ ಶ್ರೀಮಂಗಲ ಸಮೀಪ ನಾಲ್ಕೇರಿ ಊರು ಮಂದ್ ಕಳೆದ 5 ವರ್ಷದಿಂದ ಪುನರಾರಂಭವಾಗಿದ್ದು ಇದೀಗ ಮಂದ್ ಗೆ ವರ್ಷದಿಂದ ವರ್ಷಕ್ಕೆ ಜೀವ ಕಳೆ ಹೆಚ್ಚಾಗುತ್ತಿದೆ.ಗ್ರಾಮದ ದೇವತಕ್ಕರ ನೇತೃತ್ವದಲ್ಲಿ ನಡೆದ ಪುತ್ತರಿ ಕೋಲ್ ಮಂದ್ ನಲ್ಲಿ ಗ್ರಾಮದ ತಂಡ ಹಾಗೂ ತಿಂಗಕೊರ್ ಮೊಟ್ಟ್ ತಲಾಕಾವೇರಿ ತಂಡ ಹಾಗೂ ಕುಟ್ಟ ಕೊಡವ ಸಮಾಜ ತಂಡ ಸೇರಿದಂತೆ ಪುಟಾಣಿ ಮಕ್ಕಳ ತಂಡಗಳು ಸಹ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವ ಮೂಲಕ ಗಮನ ಸೆಳೆಯಿತು.
ಪುತ್ತರಿ ಕೋಲಾಟ್, ಪರಿಯಕಳಿ, ಉಮ್ಮತಾಟ್, ವಾಲಗತಾಟ್, ಬಾಳೋಪಾಟ್, ಕತ್ತಿಯಾತ್, ಬೊಳಕಾಟ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಈ ಸಂದರ್ಭ ಗ್ರಾಮದ ಪುರುಷರು ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಇದೇ ಪ್ರಥಮ ಬಾರಿಗೆ ನಾಲ್ಕೇರಿ ಗ್ರಾಮದ ವ್ಯಾಪ್ತಿಗೆ ಬರುವ ಹರಿಹರ ನಾಡ್ ಮಂದ್ ಗೆ ಈ ಬಾರಿ ತೆರಳುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಯುವ ಸಮುದಾಯ ಹಿರಿಯರ ಮಾರ್ಗದರ್ಶನದಲ್ಲಿ ಮತ್ತೆ ಮಂದ್ ಗಳ ಮಹತ್ವ ಅರಿತು ಅವುಗಳಿಗೆ ಹೆಚ್ಚಿನ ಜೀವಂತಿಕೆ ನೀಡಲು ಮುಂದಾಗಿರುವುದು ಸಂತಸದ ವಿಚಾರವಾಗಿದೆ.