ಪೌರ ಕಾರ್ಮಿಕರು ಚಳಿಯನ್ನು ಲೆಕ್ಕಿಸದೇ ಬೆಳಿಗಿನಜಾವದಿಂದಲೇ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿರುತ್ತಾರೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಪೌರಕಾರ್ಮಿಕರಿಗೆ ಪುರಸಭೆ ವತಿಯಿಂದ ಚಳಿಗಾಲದ ಹಿನ್ನೆಲೆಯಲ್ಲಿ ಸಮವಸ್ತ್ರ ಹಾಗೂ ಸ್ವೆಟರ್‌ನ್ನು ವಿತರಿಸಲಾಯಿತು.

ಈ ಕುರಿತು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ಪೌರ ಕಾರ್ಮಿಕರು ಚಳಿಯನ್ನು ಲೆಕ್ಕಿಸದೇ ಬೆಳಿಗಿನಜಾವದಿಂದಲೇ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿರುತ್ತಾರೆ. ಚಳಿಯಿಂದ ರಕ್ಷಿಸಿಕೊಳ್ಳುವ ಹಿನ್ನೆಲೆಯಲ್ಲಿ ೯೬ ಪೌರಕಾರ್ಮಿಕರಿಗೆ ಗುಣಾತ್ಮಕವುಳ್ಳ ಸ್ವೆಟರ್ ಮತ್ತು ಸಮವಸ್ತ್ರವನ್ನು ವಿತರಿಸಲಾಗಿದೆ. ಜೊತೆಗೆ ಪಟ್ಟಣದ ಪುರಸಭೆ ಮಾಹಿತಿಯು ಪ್ರತಿಯೊಬ್ಬರಿಗೂ ಲಭ್ಯವಾಗುವ ನಿಟ್ಟಿನಲ್ಲಿ ಡಿಜಿಟಲ್ ನಾಮಫಲಕ ಉದ್ಘಾಟಿಸಿ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಒದಗಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಡಿಜಿಟಲ್ ನಾಮಫಲಕ ಹೊಂದಿರುವ ಏಕೈಕ ಪುರಸಭೆ ಎಂದರೆ ಹಗರಿಬೊಮ್ಮನಹಳ್ಳಿ ಮಾತ್ರ. ಪಟ್ಟಣದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಪಟ್ಟಣದ ಜನರು ವ್ಯಾಟ್ಸಾಪ್ ಗ್ರೂಪ್‌ಗಳಲ್ಲಿ ತಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಕೇಳುತ್ತಿದ್ದು, ಕೂಡಲೇ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯಪ್ರವೃತ್ತರಾಗಿದ್ದೇವೆ. ಪಟ್ಟಣವನ್ನು ಸುಂದರ ನಗರ ಮಾಡುವ ನಿಟ್ಟಿನಲ್ಲಿ ವಿವಿಧ ವಾರ್ಡ್ಗಳಲ್ಲಿ ಇರುವ ಪಾರ್ಕ್ಗಳಿಗೆ ಹೊಸರೂಪ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ಪವಾಡಿ ಹನುಮಂತಪ್ಪ, ತ್ಯಾವಣಗಿ ಕೊಟ್ರೇಶ, ಉಪ್ಪಾರ ಬಾಳಪ್ಪ, ತಾ.ಪಂ.ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೆಂದ್ರಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಗುಂಡ್ರು ಹನುಮಂತಪ್ಪ, ಪುರಸಭೆ ಕಂದಾಯ ಅಧಿಕಾರಿ ಮಾರೆಪ್ಪ, ಸಮುದಾಯ ಸಂಘಟನಾಧಿಕಾರಿ ಬಸವರಾಜ, ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ, ಸಿಬ್ಬಂದಿ ಪ್ರಭಾಕರ, ಮಾರುತಿ, ಮಾರ್ಕಂಡಯ್ಯ, ಬಾಬು ಇದ್ದರು.