ಸಾರಾಂಶ
ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆ ಕಚೇರಿ ಭ್ರಷ್ಟಾಚಾರದ ಕೂಪವಾಗಿದ್ದು, ಜನಸಾಮಾನ್ಯರ ಕೆಲಸ ಮಾಡಲು ಮೀನಮೇಷ ಎಣಿಸುತ್ತಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕನ್ನಡ ಪಕ್ಷದ ಪದಾಧಿಕಾರಿಗಳು ಒತ್ತಾಯಿಸಿದರು.
ನಗರಸಭೆ ದುರಾಡಳಿತದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಹಲವು ಮುಖಂಡರು ಮಾತನಾಡಿ, ನಗರಸಭೆಯ ಕಂದಾಯ ಶಾಖೆಯಲ್ಲಿನ ನಿರ್ಲಕ್ಷ್ಯ ಧೋರಣೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಿ ಜನ ಸಾಮಾನ್ಯರ ಕೆಲಸಗಳಿಗೆ ತೊಂದರೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಕಂದಾಯ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲುವು ಭ್ರಷ್ಟ ಅಧಿಕಾರಿಗಳಂತೂ ಇ- ಖಾತೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಅಲೆಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ, ಮಧ್ಯವರ್ತಿಗಳ ಹಾವಳಿಯಂತೂ ಹೇಳತೀರದಾಗಿದೆ, ಮಧ್ಯವರ್ತಿಗಳ ಮೂಲಕ ಹೋದಂತಹ ಅರ್ಜಿಗಳನ್ನು ಬಹಳ ಮುತುವರ್ಜಿ ವಹಿಸಿ ವಾರದೊಳಗೆ ಇ- ಖಾತೆ ಮಾಡಿಕೊಡುವ ಅಧಿಕಾರಿಗಳು ಸಾಮಾನ್ಯ ಜನರಿಂದ ಹೋದ ಅರ್ಜಿಗಳನ್ನು ಮೂಟೆ ಕಟ್ಟಿ ಮೂಲೆಗೆ ಎಸೆದು ಇಲ್ಲ ಸಲ್ಲದ ನೆಪ ಹೇಳಿ ತಿಂಗಳಾನುಗಟ್ಟಲೆ ಅಲೆಸುವ ದೃಶ್ಯ ಸಾಮಾನ್ಯವಾಗಿದೆ ಎಂದು ಆರೋಪಿಸಿದರು.
ಆರೋಗ್ಯ ಶಾಖೆಯಲ್ಲೂ, ಜನನ, ಮರಣ ಪ್ರಮಾಣ ಪತ್ರ ಪಡೆಯಲು ಇಂತಿಷ್ಟು ವಸೂಲಿ ಆಗುತ್ತಿದೆ. ಈ ಇಂದೆ 2009ರಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾದಾಗ ನಮ್ಮ ಕನ್ನಡ ಪಕ್ಷದಿಂದ ಇದು ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿ ಪ್ರತಿಭಟಿಸಲಾಗಿತ್ತು. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಗರಿಕರು ಇಂದು ಇಡೀ ಶಾಪ ಹಾಕುವಂತಾಗಿದೆ, ರಸ್ತೆಗಳಲ್ಲಿ ಒಡೆದು ಹಾಳಾಗಿರುವ ಚೇಂಬರ್ ಗಳನ್ನು ಈ ಕೂಡಲೇ ಸರಿಪಡಿಸಬೇಕು ಮತ್ತು ನಾಗರ ಕೆರೆಯಲ್ಲಿ ಹೋಗಿರುವ ಒಳಚರಂಡಿ ಮಾರ್ಗವನ್ನು ಈ ಕೂಡಲೇ ಬದಲಿಸಿ ಮೂರು ಹಂತಗಳಲ್ಲಿ ಶುದ್ಧೀಕರಣ ಕೈಗೊಂಡು ದೊಡ್ಡ ತುಮಕೂರು ಮತ್ತು ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಮತ್ತು ಜಾನುವಾರುಗಳಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು ಎಂದರು.ಕಂದಾಯ ಶಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ ಜನ ಸಾಮಾನ್ಯರ ಕೆಲಸ ಮಾಡದೆ ವಿನಾಃ ಕಾರಣ ಅಲೆಸುತ್ತಿರುವ ಕೆಲವು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪಿಐಡಿ ಹಾಕಲು ಲಂಚ:ನಗರದಲ್ಲಿ ಸುಮಾರು 15 ಸಾವಿರ ಆಸ್ತಿಗಳಿವೆ, ಮಾರ್ಚ್ ತಿಂಗಳಲ್ಲಿ ಸರ್ಕಾರ ಬಿ ಖಾತೆ ಮಾಡಲು ಆದೇಶ ಮಾಡಿತ್ತು, ಇದನ್ನೇ ಬಂಡವಾಳ ಮಾಡಿಕೊಂಡ ವಿಷಯ ನಿರ್ವಾಹಕರಾದ ಮಾದವಿ ಅವರು ಆಸ್ತಿಗೆ ಪಿಐಡಿ ಸಂಖ್ಯೆ ಹಾಕಿಕೊಡಲು 1 ರಿಂದ 5 ಸಾವಿರ ರು.ಗಳ ವರೆಗೆ ಲಂಚ ಪಡೆಯುತ್ತಿದ್ದಾರೆ. ಶಾರದಾ ಎಂಬ ಮತ್ತೊಬ್ಬ ಅಧಿಕಾರಿಯೂ ಸಹ ಲಂಚವಿಲ್ಲದೆ ಕೆಲಸ ಮಾಡುವುದಿಲ್ಲ. ಇತ್ತೀಚೆಗೆ ನಗರಸಭೆ ಆರೋಗ್ಯ ನಿರೀಕ್ಷಕರ ಮೇಲೆ ಪೋನ್ ಪೇ ಮೂಲಕ ಲಂಚ ಪಡೆದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಈ ಎಲ್ಲರ ಮೇಲೂ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಸುವ ಭರವಸೆ:ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 50 ರಿಂದ 80 ಇ- ಖಾತೆಗಳನ್ನು ಮಾಡುತ್ತಿದ್ದೇವೆ. ಸರ್ಕಾರ ಬಿ ಖಾತಾ ಅಭಿಯಾನ ಪ್ರಾಂಭಿಸಿದ್ದರಿಂದ ಮಾರ್ಚ್ ನಿಂದ ಇಲ್ಲಿಯವರೆಗೆ 3700 ಅರ್ಜಿಗಳು ಬಂದಿವೆ, ಇನ್ನೂ ಬರುತ್ತಿವೆ, ಈಗಾಗಲೇ 2650 ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ನಮ್ಮಲ್ಲಿ ಸಿಬ್ಬಂದಿ ಕೊರತೆಯೂ ಇದೆ, ಹಾಗಾಗಿ ತೊಂದರೆಗಳಾಗುತ್ತಿವೆ. ಆದಷ್ಟೂ ಬೇಗ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ ನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಅಂಜನೇಯ, ರೈತ ಸಂಘದ ಮುತ್ತೇಗೌಡ, ಮೂರ್ತಿ, ಮುನಿನಾರಾಯಣಪ್ಪ, ಶಿವರಾಜ್ ಕುಮಾರ್ ಸಂಘದ ರಮೇಶ್, ಮುಖಂಡರಾದ ಮೋಹನ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.ಫೋಟೋ-
6ಕೆಡಿಬಿಪಿ3- ದೊಡ್ಡಬಳ್ಳಾಪುರ ನಗರಸಭೆಯ ದುರಾಡಳಿತ ಖಂಡಿಸಿ ಕನ್ನಡ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.