ಮಳೆಗಾಲ ಬಂದರೂ ಚರಂಡಿ ಸ್ವಚ್ಛತೆಯತ್ತ ಗಮನ ಹರಿಸದ ನಗರಸಭೆ

| Published : May 29 2024, 12:47 AM IST

ಸಾರಾಂಶ

ಮಳೆಗಾಲ ಸಮೀಪಿಸಿದರೂ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಚರಂಡಿ ದುರಸ್ತಿ, ಸ್ವಚ್ಛತೆಯತ್ತ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ. ನಗರದಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಮಳೆಯಾದರೆ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯವಾಗಿದೆ.

ಹಾವೇರಿ: ಮಳೆಗಾಲ ಸಮೀಪಿಸಿದರೂ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಚರಂಡಿ ದುರಸ್ತಿ, ಸ್ವಚ್ಛತೆಯತ್ತ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ. ನಗರದಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಮಳೆಯಾದರೆ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯವಾಗಿದೆ.

ಸ್ಥಳೀಯ ನಗರಸಭೆ ೩೧ ವಾರ್ಡ್‌ಗಳನ್ನು ಹೊಂದಿದ್ದು, ನಗರದಲ್ಲಿನ ರಾಜಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಪ್ರತಿವರ್ಷ ಮಳೆಗಾಲ ಬಂತೆಂದರೆ ನಗರದ ಜನರು ಬೆಚ್ಚಿಬೀಳುವಂತಾಗಿದೆ. ದೊಡ್ಡ ಪ್ರಮಾಣದಲ್ಲಿ ಒಂದೆರಡು ಮಳೆಯಾದರೆ ನಗರದ ಪ್ರಮುಖ ರಸ್ತೆಗಳ ಮೇಲೆಯೇ ಚರಂಡಿ ನೀರು ಹೊಳೆಯಂತೆ ಹರಿದು ಜಲಾವೃತಗೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಬಹು ದಿನಗಳಿಂದ ರಾಜಕಾಲುವೆ ಸೇರಿ ಚರಂಡಿ ಹಾಗೂ ಗಟಾರಗಳು ಸಂಪೂರ್ಣ ಹದಗೆಟ್ಟಿದೆ. ತ್ಯಾಜ್ಯ ತುಂಬಿಕೊಂಡಿದ್ದು ಕೊಳಚೆ ನೀರು ಮುಂದೆ ಹರಿಯುತ್ತಿಲ್ಲ. ಕಳೆದ ಕೆಲ ದಿನಗಳಿಂದ ಮಳೆ ಆರಂಭವಾಗಿದ್ದು, ಸಣ್ಣ ಮಳೆಯಾದರೆ ಸಾಕು ಚರಂಡಿ, ಗಟಾರುಗಳು ತುಂಬಿಕೊಂಡು ರಸ್ತೆಗೆ ಹರಿಯುತ್ತಿವೆ. ಆದರೆ, ನಗರಸಭೆ ಮಾತ್ರ ಹೂಳು ಮತ್ತು ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಕೆಲವೆಡೆ ಹೂಳು ತೆಗೆದಿದ್ದರೂ ರಸ್ತೆ ಪಕ್ಕದಲ್ಲಿಯೇ ಬಿಸಾಡಿದ್ದರಿಂದ ಸಮಸ್ಯೆ ಹಾಗೇ ಮುಂದುವರಿದಿದೆ. ನಗರದಲ್ಲಿ ರಾಜಕಾಲುವೆ, ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ತಾಜ್ಯದಿಂದ ತುಂಬಿ ತುಳುಕುತ್ತಿದ್ದು, ಗೊಬ್ಬು ನಾರುತ್ತಿವೆ. ಮಳೆ ಬಂದರೆ ಚರಂಡಿ ನೀರು, ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತದೆ. ಹೀಗಾಗಿ ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಲೇ ಮೂಗು ಮುಚ್ಚಿಕೊಂಡೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮಳೆ ಬಂದಾಗ ನಗರದ ಹಾನಗಲ್ ರಸ್ತೆ, ಪಿ.ಬಿ.ರಸ್ತೆಯ ಶಹರ ಪೊಲೀಸ್ ಠಾಣೆ ಸಮೀಪ ಮೊಣಕಾಲು ತನಕ ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ನಾಗೇಂದ್ರನಮಟ್ಟಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ, ಬಸವೇಶ್ವರ ನಗರದ ಸಿ ಬ್ಲಾಕ್ ಹತ್ತಿರದ ರೈಲ್ವೆ ಗೇಟ್ ಸಮೀಪ ಚರಂಡಿ ನೀರು, ತ್ಯಾಜ್ಯ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿದ್ದು, ವಾಹನ ಸವಾರರು, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ನಗರದಲ್ಲಿನ ರಾಜಕಾಲುವೆ, ಚರಂಡಿ ಹಾಗೂ ಗಟಾರಗಳ ನಿರ್ವಹಣೆ ಮಾಡದ ಪರಿಣಾಮ ಶಿವಬಸವ ನಗರ, ಶಿವಾಜಿ ನಗರದ ತಗ್ಗು ಪ್ರದೇಶಗಳಿಗೆ ತ್ಯಾಜ್ಯ ನೀರು ನುಗ್ಗಿ ಅವಾಂತರ ಸೃಷ್ಠಿಸಿದ ಉದಾಹರಣೆಗಳು ಸಾಕಷ್ಟಿವೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ದೊಡ್ಡ ಮಳೆಯಾದರೆ ಸಾಕು ನಗರದಲ್ಲಿ ಎಲ್ಲೆಂದರದಲ್ಲಿ ಕೊಳಚೆ ನೀರು, ತ್ಯಾಜ್ಯ ಹರಿದು ನಗರದ ತುಂಬೆಲ್ಲ ದುರ್ವಾಸನೆ ಹರಡಿ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಹೀಗಾಗಿ ಸ್ಥಳೀಯ ನಗರಸಭೆ ಈ ಬಾರಿಯಾದರೂ ಮುನ್ನೆಚ್ಚರಿಕೆಯಾಗಿ ನಗರದಲ್ಲಿ ರಾಜಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ರಾಜಕಾಲುವೆ ಒತ್ತುವರಿ ಆರೋಪ: ಸ್ಥಳೀಯ ಬಸವೇಶ್ವರ ನಗರದ ೧೪ನೇ ಕ್ರಾಸ್‌ನಿಂತ ಕೆಎಲ್‌ಇ ಸ್ಕೂಲ್, ಇಜಾರಿಲಕಮಾಪುರ ಮಾರ್ಗವಾಗಿ ದುಂಡಿಬಸವೇಶ್ವರ ಕೆರೆಗೆ ಸೇರುವ ರಾಜಕಾಲುವೆ ಮಾರ್ಗ ಮಧ್ಯೆ ಅಲ್ಲಲ್ಲಿ ಪ್ರಭಾವಿಗಳು ಹಾಗೂ ಮುಖಂಡರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ನಗರದಲ್ಲಿ ಮಳೆ ಬಂದಾಗ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಎಲ್ಲೆಂದರಲ್ಲಿ ರಸ್ತೆ ಮೇಲೆಯೆ ಹರಿಯುವಂತಾಗಿದೆ. ಅಲ್ಲದೇ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕೆಲವರು ಅಂಗಡಿ-ಮುಂಗಟ್ಟುಗಳನ್ನು ತೆರೆದಿರುವುದರಿಂದ ಕಾಲುವೆಗಳ ಸ್ವಚ್ಛತೆಗೂ ಅಡ್ಡಿಯಾಗುತ್ತಿವೆ. ಇದರಿಂದ ರಾಜಕಾಲುವೆ ಸ್ವಚ್ಛತೆಗೆ ಹಿನ್ನಡೆಯಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ರಾಜಕಾಲುವೆ, ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹೂಳು ತುಂಬಿ, ತ್ಯಾಜ್ಯ ಸಂಗ್ರಹಗೊಂಡು ಕೊಳಚೆ ನೀರು ಸರಾಗವಾಗಿ ಹರಿಯದೇ ಸಮಸ್ಯೆಯಾಗುತ್ತಿದೆ. ನಗರದ ಚರಂಡಿಗಳ ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳು ಗಮನಹರಿಸದಿದ್ದರೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗುತ್ತದೆ ಸಾಮಾಜಿಕ ಕಾರ್ಯಕರ್ತ ಸತೀಶ ಮಡಿವಾಳರ ಹೇಳಿದರು.ಮಳೆಗಾಲ ಆರಂಭಕ್ಕೂ ಮುನ್ನವೇ ಮುನ್ನೆಚ್ಚೆಕೆಯಾಗಿ ನಗರದಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಭಾಗದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಹಾನಗಲ್ಲ ರಸ್ತೆ, ಪಿ.ಬಿ. ರಸ್ತೆಯಲ್ಲಿ ನೀರು ನಿಲ್ಲದಂತೆ ಚರಂಡಿಗಳನ್ನು ಸ್ವಚ್ಛಗೊಳಿಸಿ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಪಿ.ಎನ್‌. ಚಲವಾದಿ ಹೇಳಿದರು.