ಪಟ್ಟಣದ ಅಭಿವೃದ್ದಿಗೆ 13 ಕೋಟಿ ರು. ಬಿಡುಗಡೆ

| Published : May 14 2025, 02:03 AM IST

ಸಾರಾಂಶ

ಪಟ್ಟಣದ ಅಭಿವೃದ್ದಿ ಕಾಮಗಾರಿಗಳಿಗಾಗಿ ನಗರಸಭಾ ನಿಧಿಯಿಂದ 7.5 ಕೋಟಿ, 15ನೇ ಹಣಕಾಸು ನಿಧಿಯಿಂದ 3 ಕೋಟಿ

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ 46 ವಿಷಯಗಳ ಬಗ್ಗೆ ಸದಸ್ಯರು ತೀವ್ರವಾಗಿ ಚರ್ಚೆ ನಡೆದು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅಧ್ಯಕ್ಷ ಶ್ರೀಕಂಠಸ್ವಾಮಿ, ಆಯುಕ್ತ ವಿಜಯ್ ಮಾತನಾಡಿ, ಪಟ್ಟಣದ 31 ವಾರ್ಡ್ಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ಬಗ್ಗೆ ಸದಸ್ಯರು ತೀವ್ರವಾಗಿ ಚರ್ಚೆ ನಡೆಸಿ ಅಭಿವೃದ್ದಿಗಳ ಸಂಬಂಧಪಟ್ಟಂತೆ ಅನುಮೋದನೆ ಪಡೆದುಕೊಂಡರು, ಪ್ರತಿ ವಾರ್ಡ್ಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ತಲಾ 10 ಲಕ್ಷ ಅನುದಾನ ನೀಡಲು ತೀರ್ಮಾನಿಸಿತು.

ಪಟ್ಟಣದ ಅಭಿವೃದ್ದಿ ಕಾಮಗಾರಿಗಳಿಗಾಗಿ ನಗರಸಭಾ ನಿಧಿಯಿಂದ 7.5 ಕೋಟಿ, 15ನೇ ಹಣಕಾಸು ನಿಧಿಯಿಂದ 3 ಕೋಟಿ, ಎಸ್ಎಫ್ಸಿ ನಿಧಿಯಿಂದ 50 ಲಕ್ಷ ಹಾಗೂ ಇತರೆ ಉಳಿಕೆ ಅನುದಾನದಿಂದ ಒಂದು ಕೋಟಿ, ಒಟ್ಟಾರೆ ಅಂದಾಜು 13 ಕೋಟಿ ರು. ಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ನಗರಸಭಾ ಸದಸ್ಯರು ಅನುಮೋದನೆ ನೀಡಿದರು.

ಸದಸ್ಯ ಎಚ್.ಎಸ್. ಮಹದೇವಸ್ವಾಮಿ ಮಾತನಾಡಿ, ಪಟ್ಟಣದ ನ್ಯಾಯಾಲಯ, ದೇವಿರಮ್ಮನಹಳ್ಳಿ ವೃತ್ತ, ಚಿಂತಾಮಣಿ ಗಣಪತಿ ಬಸ್ ಶೆಲ್ಟರ್ ಗಳ ಬಳಿ ಅನಧಿಕೃತವಾಗಿ ಹಾಲಿನ ಬೂತ್ ಗಳು ನಿರ್ಮಾಣವಾಗಿವೆ, ಬೂತ್ ನಿರ್ಮಾಣಕ್ಕೆ ನಗರಸಭೆಗೆ ಅರ್ಜಿ ಸಲ್ಲಿಸಿದ ದಾಖಲೆಯಿಲ್ಲ, ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸದಸ್ಯರಾದ ಸಿದ್ದರಾಜು ,ಖಾಲೀದ್ ಅಹಮ್ಮದ್ ಸಭೆಯ ಬಾವಿಗೆ ಇಳಿದು ಪ್ರತಿಭಟಿಸಿದರು. ಆಯುಕ್ತ ವಿಜಯಕುಮಾರ್ ಮಾತನಾಡಿ, ಸಭೆಯಲ್ಲಿ ಅಧ್ಯಕ್ಷ ಶ್ರೀಕಂಠಸ್ವಾಮಿ , ಉಪಾಧ್ಯಕ್ಷೆ ರಿಹಾನ ಬಾನು ಹಾಗೂ ಸದಸ್ಯರು ಅಭಿವೃದ್ದಿ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಕೈಗೊಂಡು ಕಾಮಗಾರಿ ಆರಂಭಿಸಲಾಗುವುದು, ಶಾಸಕ ದರ್ಶನ್ ಧ್ರುವನಾರಾಯಣ ಅವರ ಮಾರ್ಗದರ್ಶನದಂತೆ ನಗರದ ಅಭಿವೃದ್ದಿಗೆ ಹಲವಾರು ಯೋಜನೆಗಳಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ರಾಷ್ಟ್ರಪತಿ ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಬಗ್ಗೆ ಮಾತನಾಡಿ, ಮೇಲ್ಸೇತುವೆ ವಿಚಾರವು ಬಹಳ ಸೂಕ್ಷ್ಮವಾಗಿದ್ದು, ರೈಲ್ವೆ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದು , ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು, ಪಟ್ಟಣದ ಆರ್.ಪಿ ಮತ್ತು ಎಂ.ಜಿ.ಎಸ್. ರಸ್ತೆಗಳಲ್ಲಿ ಫಟ್ಪಾತ್ ತೆರವು ಕಾರ್ಯವನ್ನು ಕೈಗೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಸದಸ್ಯರಾದ ಮೀನಾಕ್ಷಿ, ವಿಜಯಕುಮಾರ್, ಮಂಗಳಮ್ಮ, ಮಹದೇವಪ್ರಸಾದ್, ಕಪಿಲೇಶ್, ಗಂಗಾಧರ್, ಮಹೇಶ್, ಯೋಗೇಶ್, ಶ್ವೇತಲಕ್ಷ್ಮಿ, ಸಿದ್ದಿಖ್, ಕೆ.ಎಂ. ಬಸವರಾಜು, ರವಿ, ಪ್ರದೀಪ್, ನಗರಸಭೆ ವ್ಯವಸ್ಥಾಪಕ ಹೇಮಕುಮಾರ್, ಪರಿಸರ ಎಂಜಿನಿಯರ್‌ ಮೈತ್ರಾದೇವಿ, ಕಂದಾಯ ಅಧಿಕಾರಿ ಜೆಸ್‌ಪಾಲ್‌ಸಿಂಗ್‌, ಎಇಇ ಶಮಂತ್, ಪ್ರೀತಂ, ಮಹೇಶ್, ನಂದಿನಿ ಇದ್ದರು.