ಹೊನ್ನಾಳಿಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಪುರಸಭೆ ಸದಸ್ಯರ ಚರ್ಚೆ

| Published : May 15 2025, 01:30 AM IST

ಸಾರಾಂಶ

ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಉಪಸ್ಥಿತಿಯಲ್ಲಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸರ್ವ ಸದಸ್ಯರ ವಿಶೇಷ ಸಭೆ ನಡೆಯಿತು.

ವಿಶೇಷ ಸಭೆ । ಶಾಸಕ ಡಿ.ಜಿ.ಶಾಂತನಗೌಡ ಉಪಸ್ಥಿತಿ । ಒಳಚರಂಡಿ, ರಸ್ತೆ ಸೇರಿ ಅನೇಕ ವಿಷಯಗಳ ಪ್ರಸ್ತಾಪ । ಕ್ರಮಕ್ಕೆ ಸೂಚನೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಉಪಸ್ಥಿತಿಯಲ್ಲಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸರ್ವ ಸದಸ್ಯರ ವಿಶೇಷ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ 3 ಹಂತದ ಕಾಮಗಾರಿಗಳಿದ್ದು 20 ಕೋಟಿಯ ಮೊದಲ ಹಂತದಲ್ಲಿ ಶೇಕಡ 60ರಷ್ಟು ಕಾಮಗಾರಿಯಾಗಿದೆ ಪಟ್ಟಣದಲ್ಲಿ ಸುಮಾರು 8 ಕಿ.ಮೀ. ಒಚರಂಡಿ ಕಾಮಗಾರಿ ನಡೆಯಬೇಕು. ಆದರೆ ಇದರಲ್ಲಿ 2.50 ಕಿ.ಮೀ. ಮಾತ್ರ ಕಾಮಗಾರಿ ಅಗಿದೆ ಎಂದು ಸಭೆಯಲ್ಲಿ ಒಳಚರಂಡಿ ಇಲಾಖೆಯ ಎ.ಇ.ಇ. ರವಿ ತಿಳಿಸಿದರು.

ಒಳಚರಂಡಿ (ಯುಜಿಡಿ) ಕಾಮಗಾರಿಗಳ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸಭೆಯಲ್ಲಿದ್ದ ಅನೇಕ ಸದಸ್ಯರು ಇಡೀ ಪಟ್ಟಣದಲ್ಲಿ ಯುಜಿಡಿ. ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ, ಯುಜಿಡಿ ಕಾಮಗಾರಿಗಾಗಿ ಪಟ್ಟಣದ ಬಹುತೇಕ ರಸ್ತೆಗಳನ್ನು ಅಗೆದಿದ್ದು ಇದರಿಂದ ರಸ್ತೆಗಳು ಹಾಳಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪುರಸಭೆ ಸದಸ್ಯರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಸದಸ್ಯರಾದ ಬಾಬೂ ಹೋಬಳದಾರ, ಧರ್ಮಪ್ಪ ಕೆ.ವಿ.ಶ್ರೀಧರ, ಸುರೇಶ್, ಸುಮಾ ಮಂಜುನಾಥ ಇಂಚರ ಯುಜಿಡಿ. ಕಾಮಾಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯುಜಿಡಿ ಯೋಜನೆಯ ಎಇಇ ರವಿ ಇನ್ನು ಎರಡು ತಿಂಗಳ ಒಳಗಾಗಿ ಯುಜಿಡಿ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಹೊನ್ನಾಳಿ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಇಂದಿರಾ ಕ್ಯಾಟೀನ್‌ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಇದಕ್ಕಾಗಿ ಸಾಮಾನ್ಯ ನಿಧಿಯಿಂದ ಹಣ ಖರ್ಚು ಮಾಡುವ ಬಗ್ಗೆ ಪ್ರಸ್ತಾಪಿಸಲಾಯಿತು, ಸದಸ್ಯ ಎಂ.ಸುರೇಶ್ ಮಾತನಾಡಿ, ಕಳೆದು 2 ವರ್ಷಗಳಿಂದ ಪಟ್ಟಣದ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಎಲ್ಲ ಸದಸ್ಯರೂ ಒಪ್ಪುವುದಾದರೇ ಇಂದೀರಾ ಕ್ಯಾಂಟೀನ್‌ಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಮಾನ್ಯನಿಧಿ ಬಳಸುವುದಾದರೆ ತನ್ನದೇನೂ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಟ್ಟಣದ ಬೀದಿ ದೀಪಗಳ ಸಮಸ್ಯೆ:

ಸಭೆಯಲ್ಲಿ ಪಟ್ಟಣದಲ್ಲಿ ಸರಿಯಾಗಿ ಬೀದಿದೀಪಗಳು ಬೆಳಗುತ್ತಿಲ್ಲ ರಾತ್ರಿ ಸಮಯದಲ್ಲಿ ಮುಂದೆ ಬರುವ ಜನರ ಮುಖ ಕೂಡ ಕಾಣುವುದಿಲ್ಲ ಈ ಮಧ್ಯೆ ಅನೇಕ ಅಪಘಾತಗಳು ಕೂಡ ನಡೆಯುತ್ತಿವೆ. ಒಬ್ಬ ಸದಸ್ಯನಾಗಿ ಈ ಬಗ್ಗೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸದಸ್ಯ ಬಾವಿಮನೆ ರಾಜಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ.ಬಸ್ ನಿಲ್ದಾಣದ ಬಳಿ, ನ್ಯಾಮತಿ ರಸ್ತೆ, ಧರ್ಮಸ್ಥಳ ಸಂಸ್ಥೆಯ ಕಚೇರಿ ಬಳಿ ಮುಖ್ಯ ರಸ್ತೆಗೆ ಕೇವಲ ಪೈಪುಗಳನ್ನು ಹಾಕಿದ್ದು ಇದಕ್ಕೆ ಇದೀಗ ಸ್ಲ್ಯಾಬ್ ಹಾಕುವ ಮೂಲಕ ಶಾಶ್ವತ ಕಾಮಗಾರಿಯಾಗಬೇಕಾಗಿದೆ ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹೊಸಕೇರಿ, ಮುಖ್ಯಾಧಿಕಾರಿ ಲೀಲಾವತಿ, ಎಂಜಿನಿಯರ್ ದೇವರಾಜ್,ಸದಸ್ಯರಾದ ಬಾವಿಮನೆ ರಾಜಪ್ಪ , ಕೆ.ವಿ.ಶ್ರೀಧರ್ ಬಾಬೂ ಹೋಬಳದಾರ್, ರಾಜೇಂದ್ರ,ಸುಮಾ ಮಂಜುನಾಥ, ಸವಿತಾಹುಡೇದ್,ಅನುಶಂಕರ್, ಪದ್ಮಪ್ರಶಾಂತ್,ಸಾಮಿನಿ ಸದಸ್ಯರಾದ ಚಂದ್ರಪ್ಪ, ನಯಾಜ್ ಅಹಮ್ಮದ್, ಬೂದಿ ರವಿ ಸೇರಿ ಅನೇಕರು ಇದ್ದರು.